ಮೈಸೂರು ನಗರ ಪಾಲಿಕೆ : ಬಜೆಟ್ ಘೋಷಣೆಗಷ್ಟೇ ಸೀಮಿತ

mcc
Published on
  • ಅನುಷ್ಠಾನದ ಕಡೆಗೆ ಆಸಕ್ತಿ ತೋರದ ನಗರ ಪಾಲಿಕೆ
  • ಪ್ರತಿ ಬಾರಿ ಹೊಸ ಯೋಜನೆಗಳು ಪ್ರಕಟ

ಸದೇಶ್ ಕಾರ್ಮಾಡ್ ಮೈಸೂರು
ನಗರದ ಸರ್ವೋತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಬಾರಿ ನಗರ ಪಾಲಿಕೆ ಬಜೆಟ್ ಮಂಡನೆ ಮಾಡುತ್ತದೆ. ಆದರೆ, ಬಜೆಟ್‌ನಲ್ಲಿ ಘೋಷಿಸಿದ ಹಲವಾರು ಅಂಶಗಳು ಜಾರಿಗೆ ಬರುವುದೇ ಇಲ್ಲ. ಬಜೆಟ್ ಘೋಷಣೆಗಳು ಕೇವಲ ಘೋಷಣೆಗಳಾಗಿ ಯೇ ಉಳಿದುಕೊಳ್ಳುತ್ತಿವೆ.

ನಗರ ಪಾಲಿಕೆ 2022-23ನೇ ಸಾಲಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಬಹುತೇಕ ಘೋಷಣೆಗಳು ಜಾರಿಗೆ ಬಂದಿಲ್ಲ. ಇದು ಕಳೆದ ಬಾರಿಯ ಬಜೆಟ್‌ನ ಕತೆ ಮಾತ್ರವಲ್ಲ ಪ್ರತಿ ವರ್ಷ ಮಂಡನೆಯಾಗುವ ಬಜೆಟ್‌ಗಳಲ್ಲಿ ಘೋಷಣೆಯಾಗುವ ಪ್ರಮುಖ ಯೋಜನೆಗಳ ಅನುಷ್ಠಾನದಲ್ಲಿ ಪಾಲಿಕೆ ಹೆಚ್ಚಿನ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.
ಕಳೆದ ಬಾರಿ ಒಟ್ಟು 993.45 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಾಗಿತ್ತು. ಬಜೆಟ್‌ನಲ್ಲಿ ಹಲವಾರು ಉತ್ತಮ ಯೋಜನೆಗಳನ್ನು ಘೋಷಿಸಿದರೂ ವಿವಿಧ ಕಾರಣಗಳಿಂದ ಘೋಷಣೆಗಳ ಅನುಷ್ಠಾನದ ಕಡೆಗೆ ಪಾಲಿಕೆ ಗಮನ ಹರಿಸದೆ ಇರುವುದು ಬೇಸರದ ಸಂಗತಿ. ಯೋಜನೆಗಳ ನಿಧಾನಗತಿಯ ಅನುಷ್ಠಾನ ನಗರದ ನಿರೀಕ್ಷಿತ ಅಭಿವೃದ್ಧಿಯ ವೇಗಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ.

ಘೋಷಿಸಿದ ಯೋಜನೆಗಳು: ಪಾಲಿಕೆ ವತಿಯಿಂದ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಲು ಖಾಸಗಿ ಫಂಕ್ಷನ್‌ಹಾಲ್‌ಗಳನ್ನು ಬಾಡಿಗೆಗೆ ಪಡೆದು ನಡೆಸಬೇಕಾ ಗಿದ್ದು, ಇದನ್ನು ತಪ್ಪಿಸಲು ಪಾಲಿಕೆ ವತಿಯಿಂದಲೇ ಸುಸಜ್ಜಿತವಾದ ಪಾಲಿಕೆ ಭವನವನ್ನು ನಗರದ ಹೃದಯ ಭಾಗದಲ್ಲಿ ಹೈಟೆಕ್ ಮಾದರಿಯಲ್ಲಿ ನಿರ್ಮಾಣ ಮಾಡಲು ಬಜೆಟ್‌ನಲ್ಲಿ 5 ಕೋಟಿ ರೂ. ಕಾಯ್ದಿರಿಸಲಾಗಿತ್ತು. ಆದರೆ, ಪಾಲಿಕೆ ಭವನ ನಿರ್ಮಾಣದತ್ತ ಪಾಲಿಕೆ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.

ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ನೀಡಲು ವಿಜಯನಗರ 2ನೇ ಹಂತದಲ್ಲಿ 350 ಕೋಟಿ ರೂ.ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ರಿಂಗ್ ನಿರ್ಮಾಣ, ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತವಾದ ಫುಟ್ಬಾಲ್, ಟೆನ್ನಿಸ್, ಬಾಸ್ಕೆಟ್‌ಬಾಲ್, ಬ್ಯಾಂಡಿಂಟನ್ ಹಾಗೂ ಕ್ರಿಕೆಟ್ ಒಳಗೊಂಡಂತೆ 2 ಕೊಟಿ ರೂ.ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣ ಘೋಷಣೆಗಷ್ಟೇ ಸೀಮಿತವಾಗಿದ್ದು, ಕ್ರೀಡಾಂಗಣ ನಿರ್ಮಾಣವಾಗಿದ್ದರೆ ಹಲವಾರು ಕ್ರೀಡಾಪಟುಗಳನ್ನು ಬೆಳಕಿಗೆ ತರಲು ಸಹಕಾರಿಯಾಗುತಿತ್ತು.

ಕೋವಿಡ್ ಸೋಂಕಿನಿಂದ ಸಾಂಸ್ಕೃತಿಕ ನಗರಿಯ ಜನರು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದರು. ಅಲ್ಲದೆ ಕೊಡಗು, ಹಾಸನ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಜನರು ಸಹ ಆರೋಗ್ಯ ಸೇವೆಗೆ ಮೈಸೂರನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಿದ್ದಾರೆ. ಹೀಗಾಗಿ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ಮೇಲೆ ಹೆಚ್ಚಿನ ಒತ್ತಡ ಕಂಡು ಬಂತು. ಈ ಹಿನ್ನೆಲೆಯಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಬಲಪಡಿಸಲು ನಗರ ಪಾಲಿಕೆ ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಜಂಟಿಯಾಗಿ 5 ಸುಸ್ಥಿರ ಆರೋಗ್ಯ ಕೇಂದ್ರ ಹಾಗೂ 5 ಪಾಲಿ ಕ್ಲಿನಿಕ್ ನಿರ್ಮಿಸಿ ತಜ್ಞ ವೈದ್ಯರಿಂದ ಸಾರ್ವಜನಿಕರಿಗೆ ಸೇವೆ ಒದಗಿಸಲಾಗುವುದು ಎಂದು ಘೋಷಿಸಲಾಗಿತ್ತು. ಅಲ್ಲದೆ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಬಿಪಿಎಲ್ ಕುಟುಂಬಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ತಪಾಸಣೆಗೆ ಎಂಆರ್‌ಐ ಹಾಗೂ ಸಿಡಿ ಸ್ಕಾೃನಿಂಗ್ ಘಟಕ ಪ್ರಾರಂಭಿಸಲಾಗುವುದೆಂದು ಘೋಷಿಸಿದರೂ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಪಾಲಿಕೆ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ನಗರದ ರಸ್ತೆಗಳು ಅಭಿವೃದ್ಧಿ ಕಾಣಲು ಪ್ರಾರಂಭಿಸಿವೆ. ಆದರೆ, ಮೂರ‌್ನಾಲ್ಕು ವರ್ಷ ನಗರದ ರಸ್ತೆಗಳು ಸಂಪೂರ್ಣ ದುಸ್ಥಿತಿಯಲ್ಲಿ ಇತ್ತು. ಈ ಹಿನ್ನೆಲೆಯಲ್ಲಿ ನಗರದ ರಸ್ತೆಗಳ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಪಾಟ್‌ಹೋಲ್ ಫಿಲ್ಲಿಂಗ್ ಮೆಷಿನ್ ಖರೀದಿಸಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ, ಇದು ಘೋಷಣೆಗೆ ಮಾತ್ರ ಸೀಮಿತವಾಗಿದೆ.

ವಿಲೇವಾರಿಯಾಗದ ಘನತ್ಯಾಜ್ಯ
ವಿದ್ಯಾರಣ್ಯಪುರಂ ಸೀವೇಜ್ ಫಾರ್ಮ್‌ನ 21 ಎಕರೆ ಪ್ರದೇಶದಲ್ಲಿ ಸಂಗ್ರಹವಾಗಿರುವ 3.08 ಲಕ್ಷ ಟನ್ ಘನತ್ಯಾಜ್ಯದಿಂದ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತ್ಯಾಜ್ಯದಿಂದ ಹೊರ ಹೊಮ್ಮುತ್ತಿದ್ದ ದುರ್ನಾತ ಹಾಗೂ ಸೊಳ್ಳೆಗಳ ಹಾವಳಿಯಿಂದ ಜನರು ಬೇಸತ್ತು ಹೋದ ಸಂದರ್ಭ ನಗರ ಪಾಲಿಕೆ ವಿರುದ್ಧ ಜನರು ಹೋರಾಟ ನಡೆಸಿದ್ದರು. ಅದರ ಪರಿಣಾಮವಾಗಿ ತ್ಯಾಜ್ಯಕ್ಕೆ ರಾಸಾಯನಿಕ ಸಿಂಪಡಿಸಿ ದುರ್ವಾಸನೆ ಹೆಚ್ಚು ಬೀರದಂತೆ ಮಾಡಲಾಯಿತು. ಈ ಘನತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲಾಗುವುದೆಂದು ಬಜೆಟ್‌ನಲ್ಲಿ ಘೋಷಿಸಲಾಯಿತು. ಬಯೋಮೈನಿಂಗ್ ಕೈಗೊಳ್ಳಲು ಕರೆದಿದ್ದ ಟೆಂಡರ್‌ನಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ವರ್ಷ ಕಳೆದರೂ ಬಯೋಮೈನಿಂಗ್ ಪ್ರಕ್ರಿಯೆಗೆ ಚಾಲನೆ ದೊರೆತ್ತಿಲ್ಲ.

ಅಭಿವೃದ್ಧಿ ಕಾಣದ ದೇವನೂರು ಕೆರೆ

ದೇವನೂರು ಕೆರೆಯು ಹೂಳು ತುಂಬಿಕೊಂಡಿದ್ದು, ಇದರಿಂದ ಸ್ಥಳೀಯ ನಿವಾಸಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕೆರೆಯು ಪ್ರಸ್ತುತ ತ್ಯಾಜ್ಯದ ತೊಟ್ಟಿಯಾಗಿ ಮಾರ್ಪಾಡು ಹೊಂದಿದೆ. ಈ ಕೆರೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಪಾಲಿಕೆಯಿಂದ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಪಾಲಿಕೆಯಿಂದ 2 ಕೋಟಿ ರೂ. ಅನುದಾನ ಕಾಯ್ದಿರಿ ಸಲಾಗಿತ್ತು. ಆದರೆ, ಕಾಮಗಾರಿಗೆ ಇದುವರೆಗೆ ಚಾಲನೆ ದೊರೆತ್ತಿಲ್ಲ. ಅಭಿವೃದ್ಧಿ ಕಾಣದ ಕೆರೆಯು ಒತ್ತುವರಿ ಭೀತಿಯನ್ನು ಎದುರಿಸುತ್ತಿದ್ದು, ಆದಷ್ಟು ಬೇಗ ಕೆರೆಯನ್ನು ಅಭಿವೃದ್ಧಿ ಪಡಿಸಿ ಸಂರಕ್ಷಣಾ ಕಾಯವನ್ನು ಕೈಗೊಳ್ಳುವ ತುರ್ತು ಅನಿವಾರ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net