ಮೈಸೂರು ಪಾಲಿಕೆಯಲ್ಲಿ ಮತ್ತೆ ಎಡವಿದ ಜೆಡಿಎಸ್ : 4 ಸ್ಥಾಯಿ ಸಮಿತಿಯಲ್ಲಿ 1 ಸ್ಥಾನ ಕೈವಶ

mcc
Published on

ಮೈಸೂರು: ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆದು ಬರೋಬ್ಬರಿ ಎಂಟು ತಿಂಗಳು ಕಳೆದ ನಂತರ ಗುರುವಾರ ಹಮ್ಮಿಕೊಂ ಡಿದ್ದ 4 ಸ್ಥಾಯಿ ಸಮಿತಿ ಅಧ್ಯಕ್ಷಗಳ ಸ್ಥಾನದ ಚುನಾವಣೆಯಲ್ಲಿ ಮೂರು ಸ್ಥಾನಗಳು ಜೆಡಿಎಸ್ ಪಾಲಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಆಘಾತ ನೀಡಿದ ಕಾಂಗ್ರೆಸ್ ಒಂದು ಸ್ಥಾಯಿ ಸಮಿತಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಗರ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಚುನಾವಣೆ ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮುನ್ನ ಫೆ.2, ಮಾ.13 ಹಾಗೂ ಮಾ.23 ರಂದು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಆದರೆ, ವಿವಿಧ ರಾಜಕೀಯ ಕಾರಣಕೋಸ್ಕರ ಮೇಯರ್ ಮೂರು ಬಾರಿ ಸಭೆಯನ್ನು ಮುಂದೂಡಿದ್ದರು. ಮೇಯರ್ ನಡೆಯ ವಿರುದ್ಧ ಆ ಸಂದರ್ಭ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದರು.

ಮತ್ತೆ ಎಡವಿದ ಜೆಡಿಎಸ್

ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಮಾಡಿಕೊಂಡ ಎಡವಟ್ಟಿನಿಂದ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ಬಿಜೆಪಿಗೆ ಒಲಿಯತು. ಹೀಗಾಗಿ ಎಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ನೀಡಲಾಗುವುದು ಎಂದು ಬಿಜೆಪಿ ಜೆಡಿಎಸ್‌ಗೆ ಮಾತುಕೊಟ್ಟಿತ್ತು. ಕೊಟ್ಟ ಮಾತಿನಂತೆ ಗುರುವಾರ ಹಮ್ಮಿಕೊಂಡಿದ್ದ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಿಜೆಪಿ ಬೆಂಬಲ ಸೂಚಿಸಿತು. ಆದರೆ, ಇಲ್ಲೂ ಕೂಡ ಜೆಡಿಎಸ್ ತನ್ನ ತಪ್ಪಿನಿಂದ ಒಂದು ಸ್ಥಾನವನ್ನು ಕಳೆದುಕೊಂಡಿತು.

ಕೈವಶವಾದ ಪಟ್ಟಣ ಯೋಜನೆ ಸ್ಥಾಯಿ ಸಮಿತಿ

ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿಯಲ್ಲಿ ಒಟ್ಟು 2 ಕಾಂಗ್ರೆಸ್, ತಲಾ 1 ಬಿಜೆಪಿ, ಬಿಎಸ್‌ಪಿ ಮತ್ತು ಜೆಡಿಎಸ್, 2 ಪಕ್ಷೇತರರ ಸದಸ್ಯರು ಇದ್ದಾರೆ. ಈ ಪೈಕಿ ಜೆಡಿಎಸ್‌ನ ಮಹಮ್ಮದ್ ರಫೀಕ್ ಗೈರು ಹಾಜರಾಗುವ ಜೆಡಿಎಸ್‌ಗೆ ಆಘಾತ ನೀಡಿದರು. ಬಿಎಸ್‌ಪಿಯ ಪಲ್ಲವಿ ಬೇಗಂ ಕಾಂಗ್ರೆಸ್‌ನ ಬೆಂಬಲಕ್ಕೆ ನಿಂತರು. ಪಕ್ಷೇತರ ಸದಸ್ಯ ಸಮೀವುಲ್ಲಾ ಅಜ್ಜು ಸಹ ಗೈರು ಹಾಜರಾ ದರು. ಸಂಖ್ಯಾಬಲ ಕಳೆದುಕೊಂಡ ಜೆಡಿಎಸ್ ನಾಮಪತ್ರ ಸಲ್ಲಿಸುವ ಗೋಜಿಗೆ ಹೋಗಲಿಲ್ಲ. ಹಾಗಾಗಿ ಕಾಂಗ್ರೆಸ್‌ನ ಎಚ್.ಎಂ. ಶಾಂತಕುಮಾರಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಆರ್. ನಾಗರಾಜ್, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಸವಿತಾ, ಲೆಕ್ಕಪತ್ರಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ವಿ. ರಮೇಶ್ ಅವಿರೋಧವಾಗಿ ಆಯ್ಕೆಗೊಂಡರು. ಈ ಸಂದರ್ಭ ಉಪ ಮೇಯರ್ ಡಾ.ಜಿ. ರೂಪಾ, ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net