

ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆಗೆ ಸೇರಿದ ಮಾರುಕಟ್ಟೆ ಮಳಿಗೆಗಳ ಬಾಡಿಗೆಯನ್ನು ಬರೋಬ್ಬರಿ 18 ವರ್ಷಗಳ ನಂತರ ಪರಿಷ್ಕರಣೆ ಮಾಡಲು ಪಾಲಿಕೆ ಮುಂದಾಗಿದ್ದು, ಬಾಡಿಗೆ ಪರಿಷ್ಕರಣೆಯಿಂದ ಪಾಲಿಕೆ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣಲಿದೆ.
ನಗರ ಪಾಲಿಕೆಗೆ ಸೇರಿದ 1941 ವಿವಿಧ ಮಾರುಕಟ್ಟೆ ಮಳಿಗೆಗಳು ಇವೆ. ಇವುಗಳ ಬಾಡಿಗೆ ಪರಿಷ್ಕರಣೆ ಕಡೆಯದಾಗಿ 2003ರಲ್ಲಿ ನಡೆ ದಿತ್ತು. ಅದಾದ ನಂತರ ಪಾಲಿಕೆ ಬಾಡಿಗೆ ಪರಿಷ್ಕರಣೆ ಮಾಡುವ ಗೋಜಿಗೆ ಹೋಗಲಿಲ್ಲ. ಪ್ರಸ್ತುತ ಬರುತ್ತಿರುವ ಬಾಡಿಗೆಯು ಕಟ್ಟಡಗಳ ನಿರ್ವಹಣೆಗೂ ಸಾಕಾಗುತ್ತಿಲ್ಲ. ಹೀಗಾಗಿ ಪಾಲಿಕೆ ಬಾಡಿಗೆ ಪರಿಷ್ಕರಣೆಗೆ ಮುಂದಾಗಿದೆ.
ಪ್ರಸ್ತುತ ಇರುವ ಬಾಡಿಗೆಯನ್ನು ಶೇ.40 ರಿಂದ ಶೇ.100 ರಷ್ಟು ಹೆಚ್ಚಿಸಲು ಪಾಲಿಕೆ ನಿರ್ಧರಿಸಿದೆ. ಈಗಾಗಲೇ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಸಭೆಯಲ್ಲಿ ದರ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್ ದೊರೆತ್ತಿದ್ದು, ಪಾಲಿಕೆ ಕೌನ್ಸಿಲ್ ಸಭೆಯ ಅನುಮೋದನೆ ಮಾತ್ರ ಬಾಕಿ ಇದೆ. ಕೌನ್ಸಿಲ್ ಸಭೆಯ ಅನುಮೋದನೆ ದೊರೆತ ನಂತರ ಪರಿಷ್ಕೃತ ಬಾಡಿಗೆ ಜಾರಿಗೆ ಬರಲಿದೆ.
ಪಾಲಿಕೆಗೆ ಸೇರಿದ 1941 ವಿವಿಧ ಮಾರುಕಟ್ಟೆ ಮಳಿಗೆಗಳು ನಗರದ 15 ಕಡೆ ಇವೆ. ದೇವರಾಜ ಮಾರುಕಟ್ಟೆ ಮಳಿಗೆಗಳು, ವಿಶ್ವೇಶ್ವರಯ್ಯ ಭವನ ಮಳಿಗೆಗಳು, ಧನ್ವಂತ್ರಿ ರಸ್ತೆ ಮಳಿಗೆಗಳು, ಲ್ಯಾನ್ಸ್‌ಡೌನ್ ಕಟ್ಟಡ ಮಳಿಗೆಗಳು, ಕಾಳಿದಾಸ ರಸ್ತೆ ಮಳಿಗೆಗಳು, ಹಳೇ ಬಸ್ ನಿಲ್ದಾಣ ಮಳಿಗೆಗಳು, ಜಯಲಕ್ಷ್ಮೀಪುರಂ ಮಳಿಗೆಗಳು, ಮೇಟಗಳ್ಳಿ ಮಳಿಗೆಗಳು, ಬಿಡಾರ ಕೃಷ್ಣಪ್ಪ ಮಳಿಗೆಗಳು, ಕುಂಬಾರ ಕೊಪ್ಪಲು ಮಳಿಗೆಗಳು, ಮಂಡಿ ಮಾರುಕಟ್ಟೆ ಮಳಿಗೆಗಳು, ವಾಣಿ ವಿಲಾಸ ಮಾರುಕಟ್ಟೆ ಮಳಿಗೆಗಳು, ಗುಜುರಿ ಮಳಿಗೆಗಳು ಹಾಗೂ ನೆಲಬಾಡಿಗೆಗೆ (ಪೆಟ್ರೋಲ್ ಬಂಕ್, ಟೆನ್ನಿಸ್ ಕೋರ್ಟ್, ಕ್ಷೀರಕೇಂದ್ರ, ಮೀನುಗಾರಿಕೆ ಮಹಾಮಂಡಲ) ನೀಡಲಾಗಿರುವ ಜಾಗದ ಬಾಡಿಗೆಯನ್ನು ಶೇ.100 ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಸುಭಾಷ್‌ನಗರದಲ್ಲಿ 35 ಮಳಿಗೆಗಳಿಗೆ 2012-13 ರಲ್ಲಿ ಬಾಡಿಗೆ ದರ ನಿಗದಿಪಡಿಸಿದ್ದು, ಈಗಾಗಲೇ 8 ವರ್ಷಗಳು ಆಗಿರುವುದರಿಂದ ಶೇ.40 ರಷ್ಟು ಬಾಡಿಗೆ ದರ ಹೆಚ್ಚಿಸುವಂತೆ ತೀರ್ಮಾನಿಸಲಾಗಿದೆ. ಅಲ್ಲದೆ, 2022-23ರ ಆರ್ಥಿಕ ವರ್ಷದಿಂದ ಪ್ರತಿ ವರ್ಷ ಎಲ್ಲ ಮಳಿಗೆಗಳ ಬಾಡಿಗೆಯನ್ನು ಶೇ.5ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ.
ಅತ್ಯಲ್ಪ ಆದಾಯ: ಪ್ರಸ್ತುತ ವಿವಿಧ ಮಾರುಕಟ್ಟೆ ಮಳಿಗೆಗಳಿಂದ ವಾರ್ಷಿಕ 1.60 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತಿದೆ. ಇನ್ನು ಮುಂದೆ ಈ ಆದಾಯ ಮೂರು ಪಟ್ಟು ಹೆಚ್ಚಾಗಲಿದೆ. ಪ್ರಸ್ತುತ ವಿವಿಧ ಮಳಿಗೆಗಳ ಬಾಡಿಗೆ 200 ರಿಂದ 2 ಸಾವಿರ ರೂ.ವರೆಗೆ ಇದೆ. ಆದರೆ, ಹಲವಾರು ಕಡೆಗಳಲ್ಲಿ ಪಾಲಿಕೆಯಿಂದ ಮಳಿಗೆಗಳನ್ನು ಬಾಡಿಗೆ ಪಡೆದ ವ್ಯಕ್ತಿಗಳು ವ್ಯಾಪಾರ ವಹಿವಾಟು ನಡೆಸದೆ ಅದೇ ಮಳಿಗೆಯನ್ನು ಬೇರೆಯವರಿಗೆ ಬಾಡಿಗೆ ನೀಡಿ ಹಣ ಸಂಪಾದಿಸುತ್ತಿದ್ದಾರೆ. ಆದರೆ, ಪಾಲಿಕೆ ಕಡಿಮೆ ಬಾಡಿಗೆಗೆ ಮಳಿಗೆಗಳನ್ನು ನೀಡಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಅಲ್ಲದೆ ಸಾಕಷ್ಟು ಮಳಿಗೆಗಳಿಂದ ನಿಗದಿ ಪಡಿಸಿದ ಅತ್ಯಲ್ಪ ಪ್ರಮಾಣದ ಬಾಡಿಗೆಯೂ ಸಹ ಸರಿಯಾಗಿ ಪಾವತಿಯಾಗುತ್ತಿಲ್ಲ. ಬಾಡಿಗೆ ಪರಿಷ್ಕರಣೆ ಮಾಡದೆ ಇರುವುದು ಹಾಗೂ ಬಾಡಿಗೆಯನ್ನು ಸಕಾಲಕ್ಕೆ ಪಾವತಿಸದೆ ಇರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಆರ್ಥಿಕ ಕೊರತೆ ಎದುರಾಗುತ್ತಿದೆ.
ಪಾರಂಪರಿಕ ಕಟ್ಟಡಗಳು ಇವೆ: ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ ಸೇರಿದಂತೆ ವಿವಿಧ ಪಾರಂಪರಿಕ ಕಟ್ಟಡಗಳಲ್ಲಿರುವ ಮಳಿಗೆಗಳನ್ನು ನಗರ ಪಾಲಿಕೆ ಬಾಡಿಗೆಗೆ ನೀಡಿದೆ. ಈ ಕಟ್ಟಡಗಳು ಅತ್ಯಂತ ದುಸ್ಥಿತಿಯಲ್ಲಿದ್ದು, ಇವುಗಳ ಬಾಡಿಗೆ ಹೆಚ್ಚಳ ಮಾಡಿದರೆ ಅದರಿಂದ ಬರುವ ಹಣದಲ್ಲಿ ಕಟ್ಟಡವನ್ನು ಸಂರಕ್ಷಿಸಲು ಸಹಕಾರಿಯಾಗುತ್ತದೆ.
'' ನಗರ ಪಾಲಿಕೆಗೆ ಸೇರಿದ ಮಳಿಗೆಗಳ ಬಾಡಿಗೆ ಪರಿಷ್ಕರಣೆಯಾಗದೆ 18 ವರ್ಷಗಳು ಕಳೆದಿವೆ. ಹೀಗಾಗಿ ಈ ಬಾರಿ ಬಾಡಿಗೆ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದ್ದು, ಮುಂದಿನ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದು ಪರಿಷ್ಕೃತ ಬಾಡಿಗೆಯನ್ನು ಜಾರಿಗೆ ತರಲಾಗುವುದು. ಪ್ರಸ್ತುತ 200 ರಿಂದ 2 ಸಾವಿರ ರೂ.ವರೆಗಿನ ವಿವಿಧ ಮಳಿಗೆಗಳು ಇವೆ. ಈಗಿನ ಪರಿಸ್ಥಿತಿಗೆ ಅವುಗಳ ಬಾಡಿಗೆ ಅತ್ಯಲ್ಪ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ ಬಾಡಿಗೆ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ.''
ಲಕ್ಷ್ಮೀಕಾಂತ್ ರೆಡ್ಡಿ, ನಗರ ಪಾಲಿಕೆ ಆಯುಕ್ತ