ಮೈಸೂರು ನಗರ ಪಾಲಿಕೆಗೆ ಹೆಚ್ಚುವರಿ ಪೌರ ಕಾರ್ಮಿಕರ ನೇಮಕಾತಿ

mcc (3)
Published on

ಮೈಸೂರು: ನಗರವನ್ನು ಮರಳಿ ನಂ.1 ಸ್ವಚ್ಛ ನಗರವಾಗಿ ರೂಪಿಸಲು ಹೆಚ್ಚುವರಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸ್ವಚ್ಛತೆಯಲ್ಲಿ ನಗರ ಮರಳಿ ನಂ.1 ಸ್ಥಾನ ಪಡೆಯಲು ಹೆಚ್ಚುವರಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಅಯೂಬ್ ಖಾನ್, ನಗರದಲ್ಲಿ ಸ್ವಚ್ಛತಾ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ, ಪೌರ ಕಾರ್ಮಿಕರ ಗೈರು ಹಾಜರಿ ಹೆಚ್ಚಾಗುತ್ತಿದೆ. ಹೀಗಾದರೆ ನಗರ ಸ್ವಚ್ಛತೆಯಲ್ಲಿ ಮರಳಿ ನಂ.1 ಸ್ಥಾನ ಪಡೆಯಲು ಹೇಗೆ ಸಾಧ್ಯ? ನಾವು ಇಂದೋರ್ ನಗರಕ್ಕೆ ಪೈಪೋಟಿ ನೀಡಬೇಕಾದರೆ ಹೆಚ್ಚುವರಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದಾಗ ಸಭೆ ಈ ವಿಚಾರಕ್ಕೆ ಒಪ್ಪಿಗೆ ಸೂಚಿಸಿ ಹೆಚ್ಚುವರಿ ಪೌರ ಕಾರ್ಮಿಕರ ನೇಮಕಕ್ಕೆ ತೀರ್ಮಾನ ಕೈಗೊಳ್ಳಲಾಯಿತು.

ಪ್ರತಿ ವಾರ್ಡ್‌ಗೆ 75 ಲಕ್ಷ ರೂ.: ಪ್ರತಿ ವಾರ್ಡ್‌ಗೆ 75 ಲಕ್ಷ ರೂ. ‘ಮೇಯರ್ ಅನುದಾನ’ ನೀಡಲಾಗುವುದು ಎಂದು ಮೇಯರ್ ಶಿವಕುಮಾರ್ ಘೋಷಿಸಿದರು. ಅಲ್ಲದೆ, ಸದಸ್ಯರಿಂದ ಕಾಮಗಾರಿ ಮಾಹಿತಿ ಪಡೆದು 7 ದಿನಗಳ ಒಳಗೆ ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಜೆಟ್‌ನಲ್ಲಿ ‘ಮೇಯರ್ ಅನುದಾನ’ ನೀಡಲಾಗುವುದು ಎಂದು ಘೋಷಿಸಲಾಗಿದ್ದು, ಈ ಬಾರಿ ಪ್ರತಿ ವಾರ್ಡ್‌ಗೆ 1 ಕೋಟಿ ರೂ.ಅನುದಾನ ಘೋಷಿಸಬೇಕು ಎಂದು ಬಿಜೆಪಿಯ ಎಂ.ಯು. ಸುಬ್ಬಯ್ಯ, ಬಿ.ವಿ.ಮಂಜುನಾಥ್ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net