

ಮೈಸೂರು: ಕಳೆದ ಬಾರಿಯ ನಗರ ಪಾಲಿಕೆ ಬಜೆಟ್‌ನ ಘೋಷಣೆಯನ್ನು ಜಾರಿಗೊಳಿಸಬೇಕು ಎಂದು ಮಾಜಿ ಮೇಯರ್ ಶಿವಕುಮಾರ್ ಆಗ್ರಹಿಸಿದರು.
ನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಬಜೆಟ್‌ನಲ್ಲಿ ಮಹಿಳೆಯರಿಗೆ ಎಲೆಕ್ಟ್ರಿಕ್ ಆಟೋ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ಧನ, ಈಜುಕೊಳ ನಿರ್ಮಾಣ, ಸರಸ್ವತಿಪುರಂ ಹಾಗೂ ಎಪಿಎಂಸಿ ಬಳಿ ಇರುವ ಕಲ್ಯಾಣಿ ಅಭಿವೃದ್ಧಿ, ಮಡಿವಾಳ, ವಿಶ್ವಕರ್ಮ, ದರ್ಜಿ ಹಾಗೂ ಮಂಗಳವಾದ್ಯ ನುಡಿಸುವವರಿಗೆ ಪ್ರೋತ್ಸಾಹ ಧನ ನೀಡುವ ಘೋಷಣೆ ಮಾಡಲಾಗಿತ್ತು. ಕಳೆದ ಬಾರಿಯ ಬಜೆಟ್ ಘೋಷಣೆ ಅನುಷ್ಠಾನಕ್ಕೆ ಒತ್ತು ನೀಡಬೇಕು ಮಾಜಿ ಮೇಯರ್ ಶಿವಕುಮಾರ್ ಒತ್ತಾಯಿಸಿದರು.
ಎರಡು ಬಾರಿ ದೇಶದ ನಂ.1 ಸ್ವಚ್ಛನಗರಿ ಪ್ರಶಸ್ತಿ ಪಡೆದಿದ್ದ ಮೈಸೂರು ಈ ಬಾರಿ 27ನೇ ಸ್ಥಾನ ಪಡೆದಿದ್ದು, ಮುಂದಿನ ಬಾರಿ ಟಾಪ್-5 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸ್ವಚ್ಛತೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕಾಯ್ದಿರಿಸಬೇಕು ಎಂದು ಸಲಹೆ ನೀಡಿದರು.
ಇಂದೋರ್ ನಗರದ ಮಾದರಿಯಲ್ಲಿ ನಮ್ಮಲ್ಲಿ 3 ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು, ಪೌರ ಕಾರ್ಮಿಕರನ್ನು ಮಾನಿಟರಿಂಗ್ ಮಾಡಲು ಕಮಾಂಡ್ ಸೆಂಟರ್ ಪ್ರಾರಂಭಿಸಬೇಕು, ನಗರದ ವೃತ್ತಗಳ ಸೌಂದರೀಕರಣಕ್ಕೆ ಒತ್ತು ನೀಡಬೇಕು, ಇಂದೋರ್ ಮಾದರಿಯಲ್ಲಿ 500 ಮೀಟರ್‌ಗೆ ಒಂದರಂತೆ ಹಸಿ ಹಾಗೂ ಒಣ ಕಸಕ್ಕೆ ಪ್ರತ್ಯೇಕ ತೊಟ್ಟಿಗಳನ್ನು ಇಡಬೇಕು ಎಂದರು.