

ಮೈಸೂರು: ನಗರದ ವೀಳ್ಯದೆಲೆ ಬೆಳೆಗಾರರಿಗೆ ಸೂಯೇಜ್ ಫಾರ್ಮ್‌ನಲ್ಲಿ ವೀಳ್ಯದೆಲೆ ಬೆಳೆಯಲು ತಲಾ 5 ಗುಂಟೆ ಜಾಗ ನೀಡಲು ಸಭೆ ಶುಕ್ರವಾರ ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಮಳಲವಾಡಿ ಗ್ರಾಮದ ಸರ್ವೇ ನಂ.1 ರಿಂದ 23, 199, 209, 210ರ ಒಟ್ಟು 57 ಎಕರೆ ಜಮೀನನ್ನು ಮುಡಾ (ಅಂದಿನ ಸಿಐಟಿಬಿ) ಸರಸ್ವತಿಪುರಂ, ತೊಣಚಿಕೊಪ್ಪಲು, ಜಯನಗರ ಬಡಾವಣೆ ನಿರ್ಮಾಣಕ್ಕೆ 1979ರಲ್ಲಿ ಭೂ ಸ್ವಾಧೀನಪಡಿಸಿಕೊಂಡಿತ್ತು. ಭೂಮಿ ಕಳೆದುಕೊ ಂಡ ಮಾಲೀಕರಿಗೆ ಪರಿಹಾರ ನೀಡಲಾಯಿತು. ಆದರೆ, ವೀಳ್ಯದೆಲೆ ತೋಟವನ್ನು ಗುತ್ತಿಗೆ ಪಡೆದು ವೀಳ್ಯದೆಲೆ ಬೆಳೆಯುತ್ತಿದ್ದ ರೈತರು ಸಂಕಷ್ಟಕ್ಕೆ ಸಿಲುಕಿದರು. ಹಾಗಾಗಿ ಮಾನವೀಯ ನೆಲೆಗಟ್ಟಿನಲ್ಲಿ 245 ಜನ ಪರಿಶಿಷ್ಟ ಜಾತಿಗೆ ಸೇರಿದ ವೀಳ್ಯದೆಲೆ ಬೆಳೆಗಾರರಿಗೆ 5 ಗುಂಟೆ ಜಾಗ ನೀಡಲು 2018ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಕುರಿತು ಅರ್ಜಿ ಆಹ್ವಾನಿಸಿ ಕ್ರಮಬದ್ಧವಾಗಿದ್ದ 46 ಅರ್ಜಿದಾ ರರಿಗೆ ಇದೀಗ ಜಾಗ ಮಂಜೂರಾತಿಗೆ ಕೌನ್ಸಿಲ್‌ನಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಸ್ಮಶಾನಕ್ಕೆ ಜಾಗ ನೀಡಲು ಸಮ್ಮತಿ:
ಸೂಯೇಜ್‌ಫಾರ್ಮ್‌ಗೆ ಹೊಂದಿಕೊಂಡಿರುವ ವೀರಶೈವ ರುದ್ರಭೂಮಿ ಜಾಗ ಕಿರಿದಾಗಿರುವ ಹಿನ್ನೆಲೆಯಲ್ಲಿ ಸೂಯೇಜ್ ಫಾರ್ಮ್ ಗೆ ಸೇರಿದ 2 ಎಕರೆ ಜಾಗವನ್ನು ವೀರಶೈವ ರುದ್ರಭೂಮಿಗೆ ನೀಡಲು ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರದ ಒಪ್ಪಿಗೆಗೆ ಕಳುಹಿಸಲು ತೀರ್ಮಾನಿಸಲಾಯಿತು.
ಈ ನಿರ್ಧಾರಕ್ಕೆ ಜೆಡಿಎಸ್‌ನ ಪ್ರೇಮಾ ಶಂಕರೇಗೌಡ, ಆರ್.ನಾಗರಾಜ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಶೋಭಾ ಸುನಿಲ್ ಹೊರತು ಪಡಿಸಿ ಉಳಿದೆಲ್ಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ಗೋವುಗಳಿಗೆ ಮೇವು ಬೆಳೆಯಲು ಮೈಸೂರು ಮಹಾರಾಜರು ಮೀಸಲಿಟ್ಟ ಜಾಗವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸದಸ್ಯರ ಮನವೊಲಿಸಿದ ಮೇಯರ್ ಶಿವಕುಮಾರ್ ಹಾಗೂ ಶಾಸಕ ಟಿ.ಎಸ್. ಶ್ರೀವತ್ಸ, ಇದೇ ರೀತಿಯ ಪ್ರಸ್ತಾವನೆ ಬೇರೆ ಸಮುದಾಯಗಳಿಂದ ಬಂದರೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಜಾಗ ಮಂಜೂರು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.