ಕೇಂದ್ರದ ನಿಲುವಿಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸ್ವಾಗತ

Published on

ಮೈಸೂರು: ನಗರದಲ್ಲಿರುವ ಶಾಸ್ತ್ರೀಯ ಭಾಷಾ ಅತ್ಯುನ್ನತ ಕನ್ನಡ ಕೇಂದ್ರವನ್ನು ಭಾರತೀಯ ಭಾಷಾ ಸಂಸ್ಥೆಯಿಂದ ಪ್ರತ್ಯೇಕಿಸಿ, ಸ್ವಾಯತ್ತ ನೀಡಿ ಮುಂದುವರಿಸಲಾಗುವುದು ಎಂಬ ಕೇಂದ್ರ ಸರ್ಕಾರದ ನಿಲುವನ್ನು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಸ್ವಾಗತಿಸಿದ್ದಾರೆ.

ಆದೇಶ ಆದಷ್ಟು ಶೀಘ್ರ ಕಾರ್ಯರೂಪಕ್ಕೆ ಬರಬೇಕು. ಶಾಸ್ತ್ರೀಯ ಭಾಷಾ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸದೆ ಮೈಸೂರಿನಲ್ಲಿಯೇ ಉಳಿಸಬೇಕು ಎಂದು ಹೇಳಿಕೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕೇಂದ್ರವು ಮೈಸೂರಿನಲ್ಲಿ ಪ್ರಾರಂಭವಾಗಿ ಹಲವು ವರ್ಷಗಳೇ ಕಳೆದಿದೆ. ಅಲ್ಲದೆ ಈ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಮೈಸೂರು ವಿವಿ ಜಾಗ ಕೊಡುವುದಾಗಿ ಒಪ್ಪಿಗೆ ನೀಡಿದೆ. ಇದಕ್ಕೆ ರಾಜ್ಯ ಸರ್ಕಾರದ ಸಮ್ಮತಿಯ ಆದೇಶವೂ ಆಗಿದೆ ಎಂದಿದ್ದಾರೆ.

ಮೈಸೂರು ಪಾರಂಪರಿಕ ಹಿನ್ನೆಲೆ ಹೊಂದಿದ್ದು ಹಲವಾರು ಕವಿಗಳು, ಸಾಹಿತಿಗಳ ಹಾಗೂ ಕಲೆಗಾರರ ಬೀಡಾಗಿದೆ. ಆದಿಕಾಲದಿಂದಲೂ ಕನ್ನಡ ಭಾಷೆಯನ್ನು ಉಳಿಸಿ, ಮೆರೆಸಿ ಕೊಂಡಾಡುತ್ತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯವಾಗಿ ಹೆಚ್ಚು ಒತ್ತು ಕೊಡುವ ಹಲವಾರು ಸಂಸ್ಥೆಗಳಿರುವುದರಿಂದ ಮೈಸೂರಿನಲ್ಲಿ ಈ ಭಾಷಾ ಕೇಂದ್ರವನ್ನು ಉಳಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net