ಮೈಸೂರು. ಚಾಮರಾಜನಗರ ಜಿಲ್ಲೆಗಳ ನೋಟರಿಗಳ ಕಾರ್ಯಾಗಾರ, ನೋಟರಿ ಕಾನೂನು ಪದ್ಧತಿ ಹಾಗೂ ಪ್ರಕ್ರಿಯೆ ಎಂಬ ಪುಸ್ತಕ ಬಿಡುಗಡೆ

37
Published on

ಮೈಸೂರು: ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದ್ದು, ಸಾಹಿತಿಯ ಮನಸ್ಸಿನಿಂದ ಬರಹದ ರೂಪದಲ್ಲಿ ಹೊರಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಹೇಳಿದರು.
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ನೋಟರಿಗಳ ಸಂಘದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಾಗಾರ ಹಾಗೂ ನೋಟರಿ ಬಿ.ಎಸ್.ಪ್ರಶಾಂತ್ ಅವರು ಕನ್ನಡಕ್ಕೆ ತರ್ಜುಮೆ ಮಾಡಿರುವ ನೋಟರಿ ಕಾನೂನು ಪದ್ಧತಿ ಹಾಗೂ ಪ್ರಕ್ರಿಯೆ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಹಿತ್ಯ ಎನ್ನುವುದು ಓದುಗನ ಮನಸ್ಸಿನಾಳಕ್ಕೆ ಪ್ರಭಾವ ಬೀರಬಲ್ಲ ಕ್ಷೇತ್ರವಾಗಿದೆ. ಸಾಹಿತ್ಯ ರಚನೆ ಕಷ್ಟದ ಕೆಲಸವಾಗಿದ್ದು, ಸಾಹಿತಿಯ ಮನಸ್ಸಿನಿಂದ ಬರಹದ ರೂಪದಲ್ಲಿ ಹೊರಬರುವ ಅನುಭವ ಓದುಗನ ಮನಸ್ಸು ಸೇರುತ್ತದೆ. ಬರವಣಿಗೆಯನ್ನು ತಪಸ್ಸಿನಂತೆ ಕಾಣಬೇಕು ಮತ್ತು ಹಿಡಿತ ಸಾಧಿಸಬೇಕು ಎಂದರು.
ನೋಟರಿಗಳು ಹೆಚ್ಚೆಚ್ಚು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದನೆಯನ್ನು ಮಾಡಿಕೊಳ್ಳಬೇಕು. ನೀವು 5 ವರ್ಷ ಶ್ರದ್ಧೆಯಿಂದ ಕೆಲಸ ಮಾಡಿ, ಕಕ್ಷಿದಾರರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಿ. ಆಗ ಯಶಸ್ಸು ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.
ಮೈಸೂರು ಮತ್ತು ಚಾಮರಾಜನಗರ ನೋಟರಿಗಳ ಸಂಘದ ಅಧ್ಯಕ್ಷ ಪಿ.ರಮೇಶ್ ಮಾತನಾಡಿ, ಸಾಹಿತಿಗಳು ಯಾವುದೇ ಸಭೆ, ಸಮಾರಂಭ ಮತ್ತಿತರ ಪ್ರದೇಶಗಳಿಗೆ ತೆರಳಿದರೂ ಬರವಣಿಗೆಯ ಮೂಲಕ ತಮ್ಮ ಅನುಭವವನ್ನು ಓದುಗರಿಗೆ ಹಂಚಿಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಅನುಭವಕ್ಕೆ ಬರವಣಿಗೆಯ ರೂಪ ನೀಡಿ ಓದುಗರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈ ಕಷ್ಟದ ಕಾಯಕ ಮಾಡುವ ಬರಹಗಾರರಿಗೆ ದಾನಿಗಳ ಸಹಕಾರ ಅಗತ್ಯವಿದೆ ಎಂದರು.
ಲಯನ್ಸ್ ಜಿಲ್ಲೆ 317ರ ಜಿಲ್ಲಾ ಪ್ರಾಂತಪಾಲ ಡಾ.ಎನ್.ಕೃಷ್ಣೇಗೌಡ, ಕರ್ನಾಟಕ ನೋಟರಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ್, ಕಾರ್ಯದರ್ಶಿ ಸಿ.ಎಸ್.ಚಿಕ್ಕಣ್ಣೇಗೌಡ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಎಸ್.ಉಮೇಶ್, ಬೆಂಗಳೂರು ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಮಧುಕರ್ ದೇಶಪಾಂಡೆ, ನ್ಯಾಯಾಧೀಶ ಪುಟ್ಟಸ್ವಾಮಿ, ಕಾಂಬ್ರೋಸ್, ಸುಬ್ರಹ್ಮಣ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net