ನರೇಗಾ ಗುರಿ ಸಾಧಿಸಲು ಮೈಸೂರು ಸಿಇಒ ನಿರ್ದೇಶನ

mysore zp ceo meeting
Published on

ಮೈಸೂರು: ನರೇಗಾ ಯೋಜನೆಯಡಿ ಕಡಿಮೆ ಮಾನವ ದಿನಗಳನ್ನು ಸಾಧಿಸಿರುವ ಗ್ರಾಮ ಪಂಚಾಯಿತಿಗಳು ಹೆಚ್ಚು ಮಾನವ ದಿನಗಳನ್ನು ಸಾಧಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಇಒಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಬುಧವಾರ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ (ಇಒ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನರೇಗ ಯೋಜನೆಯಡಿ ನೀಡಿರುವ ಗುರಿ ಸಾಧಿಸಲು ಎಲ್ಲರು ಪ್ರಯತ್ನಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷೃ ತೋರಬಾರದು ಎಂದರು.

ಅಮೃತ ಸರೋವರ ಯೋಜನೆ ಪ್ರಗತಿ, ಪಂಚ ಅಭಿಯಾನ ಪ್ರಗತಿ, ಗೋಮಾಳ ಪ್ರಗತಿ ಹಾಗೂ ಸ್ವಚ್ಛ ಭಾರತ್ ಅಭಿಯಾನ, ವೈಯಕ್ತಿಕ ಶೌಚಗೃಹ, ಸಮುದಾಯ ಶೌಚಗೃಹ, ಬೂದು ನೀರು ನಿರ್ವಹಣೆ ಕಾಮಗಾರಿ, ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಮತ್ತು ಕಸ ಸಂಗ್ರಹಣೆ ಪ್ರಾರಂಭಿಸಿರುವ ಕುರಿತು ಚರ್ಚಿಸಿದರು.

ಒಂದು ವಾರದೊಳಗೆ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಡಿಜಿಟಲ್ ಗ್ರಂಥಾಲಯಗಳನ್ನಾಗಿ ಮಾರ್ಪಾಡು ಮಾಡಿ, ಮಕ್ಕಳ ನೊಂದಣಿಯನ್ನು ಶೇ.100 ರಷ್ಟು ಮಾಡಿಸಬೇಕು. ಬಾಕಿ ಮತ್ತು ಪ್ರಸ್ತುತ ಸಾಲಿನ ಬೇಡಿಕೆ ತೆರಿಗೆ ವಸೂಲಾತಿ ಮಾಡಲು ಕ್ರಮ ವಹಿಸಬೇಕು. ಬಾಪುಜಿ ಸೇವಾ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹ ಜ್ಯೋತಿ ಅರ್ಜಿಗಳನ್ನು ಹಾಕುವಂತೆ ಕಟ್ಟುನಿಟ್ಟಿನ ಕ್ರಮಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಸೌಮಿತ್ರ, ಮುಖ್ಯ ಲೆಕ್ಕಾಧಿಕಾರಿ ಎಚ್.ಇ. ನಂದಾ, ಯೋಜನಾ ನಿರ್ದೇಶಕಿ ಸವಿತಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net