ರಿಲ್ಯಾಕ್ಸ್ ಮೂಡ್‌ನಲ್ಲಿ ಮೈಸೂರಿನ ಅಭ್ಯರ್ಥಿಗಳು

Published on

ಮೈಸೂರು: ಬಿರು ಬಿಸಿಲಿನಲ್ಲಿ ಬಿರುಸಿನ ಪ್ರಚಾರ ನಡೆಸಿ ಚುನಾವಣೆ ಎದುರಿಸಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರಮುಖ ಅಭ್ಯರ್ಥಿಗಳು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಮತದಾನ ಮುಗಿದ ಮರುದಿನ ಪಕ್ಷದ ಕಚೇರಿಗಳಿಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ಮುಖಂಡರು, ಕಾರ್ಯಕರ್ತರೊಂದಿಗೆ ಕೆಲ ಸಮಯ ಕಳೆದರು. ಪೂರ್ವಾಹ್ನದ ವರೆಗೆ ಮನೆಯಲ್ಲಿ ವಿಶ್ರಾಂತಿ ಪಡೆದು ಕುಟುಂಬದವರೊಂದಿಗೆ ಕೆಲಸ ಸಮಯ ಕಳೆದ ಅಭ್ಯರ್ಥಿಗಳು, ಬಳಿಕ ಪಕ್ಷದ ಕಚೇರಿಯತ್ತ ತೆರಳಿದರು.
ಕುಟುಂಬದೊಂದಿಗೆ ಸಮಯ:
ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಮತದಾನ ಮುಗಿದ ಬಳಿಕ ವಿಶ್ರಾಂತಿ ಪಡೆದರು. ಎಂದಿನಂತೆ ವಾಕಿಂಗ್ ಮುಗಿಸಿದ ಅವರು, ಪತ್ನಿ, ಮಕ್ಕಳ ಜತೆಗೆ ಸುಮಾರು ಹೊತ್ತು ಎಲೆಕ್ಷನ್ ಕುರಿತು ಚರ್ಚೆ ನಡೆಸಿ, ಮಕ್ಕಳೊಂದಿಗೆ ಆಟವಾಡಿದರು. ಪಕ್ಷದ ಕಚೇರಿಗೆ ಆಗಮಿಸಿದ ಪಕ್ಷದ ಮುಖಂಡರು, ಹಿರಿಯ ಕಾರ್ಯಕರ್ತರೊಂದಿಗೆ ಮತದಾನ ನಂತರದ ಸಮಾಲೋಚನೆ ನಡೆಸಿದರು. ಗೆಲುವಿನ ಲೆಕ್ಕಾಚಾರ, ಮತದಾನ ಪ್ರಮಾಣ, ಎಲ್ಲಿ, ಹೇಗಿದೆ ಇತ್ಯಾದಿ ಮಾಹಿತಿ ವಿನಿಮಯ ಮಾಡಿಕೊಂಡರು.
ಕೃತಜ್ಞತೆ ಸಲ್ಲಿಸಿದ ಯದುವೀರ್:
ಮತದಾನ ಮುಗಿದ ಬಳಿಕ ಶನಿವಾರ ಕುವೆಂಪುನಗರದಲ್ಲಿರುವ ಬಿಜೆಪಿ ಚುನಾವಣಾ ಕಚೇರಿಗೆ ತೆರಳಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಸುಮಾರು ಎರಡು ಗಂಟೆಕಾಲ ಮುಖಂಡರು ಮತ್ತು ಬೆಂಬಲಿಗರೊಂದಿಗೆ ಸಭೆ ನಡೆಸಿ ಕೃತಜ್ಞತೆ ಸಲ್ಲಿಸಿದರು.
ಬಳಿಕ ಕೊಡಗಿನತ್ತ ಪ್ರಯಾಣ ಬೆಳೆಸಿದ ಅವರು ಚುನಾವಣೆಯ ಮತ ಪ್ರಚಾರ ಕಾರ್ಯದಲ್ಲಿ ಸಹಕರಿಸಿದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬಳಿಕ ಮೈಸೂರಿಗೆ ಆಗಮಿಸಿ, ಮೇ 1ರ ವರೆಗೆ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಉತ್ತರ ಕರ್ನಾಟಕದಲ್ಲಿ ಜರುಗುವ ಎರಡನೇ ಹಂತದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಲೋಕಸಭೆ ಚುನಾವಣೆಯ ಮತದಾನವೇನೂ ಮುಗಿದಿದೆ. ಆದರೆ ಫಲಿತಾಂಶಕ್ಕಾಗಿ ಇನ್ನೂ ಒಂದು ತಿಂಗಳ ಕಾಲ ಕಾತರದಿಂದ ಕಾಯಬೇಕಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸತತ ಒಂದು ತಿಂಗಳ ಕಾಲ ಅಭ್ಯರ್ಥಿಗಳು ಬಿರು ಬಿಸಿಲಿನಲ್ಲಿಯೂ ಸುತ್ತಾಡಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಈಗ ಫಲಿತಾಂಶದ ಲೆಕ್ಕಚಾರದಲ್ಲಿ ಒಂದು ತಿಂಗಳ ಕಾಲ ಕಾಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net