

ಮೈಸೂರು: ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಶ್ರಮಿಸುವ ಜತೆಗೆ ಶೈಕ್ಷಣಿಕ ನಿರಂತರತೆ ಉತ್ತೇಜಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸೆ.29 ರಂದು ಉದ್ಘಾಟನೆಗೊಳ್ಳಲಿದೆ.
ಜಿಲ್ಲೆಯ ವಿವಿಧ ಬಿಸಿಎಂ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡಿ ಸಾರ್ಥಕ ಜೀವನದತ್ತ ಮುಖ ಮಾಡಿರುವ ಹಿರಿಯ ವಿದ್ಯಾರ್ಥಿಗಳು ಸಂಘವನ್ನು ಅಸ್ತಿತ್ವಕ್ಕೆ ತಂದಿದ್ದು, ಬಿಸಿಎಂ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಶೈಕ್ಷಣಿಕ ನೆರವು ನೀಡುವ ಉದ್ದೇಶ ಹೊಂದಿದ್ದಾರೆ.
ದೇಶ-ವಿದೇಶಗಳಲ್ಲಿ ನೆಲೆಸಿರುವ 2000ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು ಸಂಘದ ಸದಸ್ಯರಾಗಿದ್ದಾರೆ. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಬಿ.ಶಿವಸ್ವಾಮಿ ಸಂಘದ ಅಧ್ಯಕ್ಷರಾಗಿದ್ದು, ಎಂ.ರಾಮಯ್ಯ ಗೌರವಾಧ್ಯಕ್ಷರಾಗಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್(ಕಾರ್ಯಾಧ್ಯಕ್ಷ), ಹಿರಿಯ ವಕೀಲ ಬಿ.ಪಿ.ರಾಜೇಶ್(ಕಾರ್ಯದರ್ಶಿ), ಜೆ.ಕೆ.ರಮೇಶ್‌ಗೌಡ(ಜಂಟಿ ಕಾರ್ಯದರ್ಶಿ), ಮುಖ್ಯಮಂತ್ರಿಗಳ ವಿಶೇಷ ಮುಖ್ಯಾಧಿಕಾರಿ ಆರ್.ಮಹದೇವ(ಉಪಾಧ್ಯಕ್ಷ), ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ರುಕ್ಮಾಂಗದ(ಖಜಾಂಚಿ) ಪದಾಧಿಕಾರಿಗಳಾಗಿದ್ದಾರೆ. ಹಿರಿಯ ವೈದ್ಯರು, ಪೊಲೀಸ್ ಅಧಿಕಾರಿಗಳು, ಐಎಎಸ್, ಕೆಎಎಸ್ ಅಧಿಕಾರಿಗಳು ಸೇರಿದಂತೆ ಅನೇಕರು ಸಂಘದಲ್ಲಿದ್ದಾರೆ.
ಸೆ.29ರಂದು ಬೆಳಗ್ಗೆ 10.30ಕ್ಕೆ ನಗರದ ಕಲಾಮಂದಿರದಲ್ಲಿ ಸಂಘವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಿವರಾಜ ಎಸ್.ತಂಗಡಗಿ, ಶಾಸಕರಾದ ತನ್ವೀರ್ ಸೇಠ್, ಸಿ.ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಕೆ.ಹರೀಶ್‌ಗೌಡ, ದರ್ಶನ್ ಧ್ರುವನಾರಾಯಣ ಇತರರು ಭಾಗವಹಿಸಲಿದ್ದಾರೆ.
ಇದೇ ವೇಳೆ ಜಿಲ್ಲೆಯ ವಿವಿಧ ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಅಡುಗೆ ಸಿಬ್ಬಂದಿ, ವಾರ್ಡನ್ ಮತ್ತು ಮೇಲ್ವಿಚಾರಕರನ್ನು ಸನ್ಮಾನಿಸಲಾಗುತ್ತದೆ. ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಆಯ್ದ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹಧನ ವಿತರಿಸಲಾಗುತ್ತದೆ.
ಬಿಸಿಎಂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಅವಶ್ಯ ವೇದಿಕೆಗಳನ್ನು ನಿರ್ಮಿಸುವುದು, ವೈಜ್ಞಾನಿಕ ಮತ್ತು ಮಾನವೀಯ ದೃಷ್ಟಿಕೋನ ಬೆಳೆಸಲು ಕಾರ್ಯಕ್ರಮಗಳನ್ನು ರೂಪಿಸುವುದು. ಉಪನ್ಯಾಸಗಳು ಹಾಗೂ ವೇದಿಕೆ ಪ್ರದರ್ಶನಗಳನ್ನು ನೀಡಲು ಹಿರಿಯ ವಿದ್ಯಾರ್ಥಿಗಳನ್ನು ಆಹ್ವಾನಿಸುವುದು. ವಿದ್ಯಾರ್ಥಿನಿಲಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವುದು. ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುವುದು. ಪ್ರಖ್ಯಾತ ವ್ಯಕ್ತಿಗಳಿಂದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಉಪನ್ಯಾಸಗಳನ್ನು ನೀಡಲು ದತ್ತಿ ಸ್ಥಾಪಿಸುವುದು. ವಿದ್ಯಾರ್ಥಿಗಳಿಗಾಗಿ ಹಿರಿಯ ವಿದ್ಯಾರ್ಥಿಗಳಿಂದ ಪುಸ್ತಕಗಳು, ಉಪಕರಣಗಳು, ಶೈಕ್ಷಣಿಕ ಸಾಮಗ್ರಿ ಇತ್ಯಾದಿ ರೂಪದಲ್ಲಿ ದೇಣಿಗೆ ಸಂಗ್ರಹಿಸುವುದು. ಜಿಲ್ಲಾ ವ್ಯಾಪ್ತಿಯ ಬಿಸಿಎಂ ವಿದ್ಯಾರ್ಥಿ ನಿಲಯಗಳಲ್ಲಿ ಪರಿಸರ ಸಂರಕ್ಷಣೆಗಾಗಿ ಗಿಡ ನೆಡಿಸುವುದು. ಸ್ವಚ್ಛತಾ ಕಾರ್ಯಕ್ರಮ ಮತ್ತು ಆರೋಗ್ಯ ಜಾಗೃತಿ, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ವಿದ್ಯಾರ್ಥಿನಿಲಯಗಳಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳು ಮತ್ತು ಇತರ ವಿಸ್ತರಣಾ ಚಟುವಟಿಕೆಗಳನ್ನು ಆಯೋಜಿಸುವುದು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಅಲ್ಲದೆ ವಿದ್ಯಾರ್ಥಿನಿಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಇಲಾಖೆ ಸಹಕಾರದೊಂದಿಗೆ ಸ್ಥಾಪಿಸುವ ಉದ್ದೇಶಗಳನ್ನು ಹೊಂದಿರುವುದಾಗಿ ಸಂಘದ ಕಾರ್ಯದರ್ಶಿ ಬಿ.ಪಿ.ರಾಜೇಶ್ ತಿಳಿಸಿದ್ದಾರೆ.
ಬಿಸಿಎಂ ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಸೆ.29ರಂದು ಕಲಾ ಮಂದಿರದಲ್ಲಿ ನಡೆಯಲಿದೆ. ಹೊರದೇಶ, ಹೊರರಾಜ್ಯದ ಮೂಲೆ ಮೂಲೆಗಳಲ್ಲಿರುವ ಸಾವಿರಾರು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮಾರಂಭದಲ್ಲಿ ನಿವೃತ್ತ ಅಡುಗೆ ಸಿಬ್ಬಂದಿ, ವಾರ್ಡನ್‌ಗಳನ್ನು ಅಭಿನಂದಿಸುತ್ತೇವೆ. ತಂದೆ ಅಥವಾ ತಾಯಿ ಇಲ್ಲದ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಬಿಸಿಎಂ ಹಾಸ್ಟಲ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತೇವೆ.ಬಿ.ಪಿ.ರಾಜೇಶ್ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ