

ಮೈಸೂರು: ಕ್ಯಾತಮಾರನಹಳ್ಳಿಯಲ್ಲಿರುವ ಮೂರು ಬಾರ್‌ಗಳನ್ನು ಬಂದ್ ಮಾಡಬೇಕೆಂದು ಒತ್ತಾಯಿಸಿ ಮಂಗಳವಾರ ಸ್ಥಳೀಯ ನಿವಾಸಿಗಳು ಬಾರ್ ಎದುರು ಪ್ರತಿಭಟನೆ ನಡೆಸಿದರು.
ಕ್ಯಾತಮಾರನಹಳ್ಳಿ ವೃತ್ತದಲ್ಲಿ ಮೂರು ಬಾರ್‌ಗಳು ಅಕ್ಕ ಪಕ್ಕದಲ್ಲಿಯೇ ಇವೆ. ಈ ಬಾರ್‌ಗಳು ಕ್ಯಾತಮಾರನಹಳ್ಳಿಯ ಜನರ ನೆಮ್ಮದಿ ಕೆಡಿಸುತ್ತಿವೆ. ಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರು ಇದ್ದಾರೆ. ಸಾಕಷ್ಟು ಜನರು ದುಡಿಮೆಯ ಬಹುತೇಕ ಹಣವನ್ನು ಬಾರ್‌ಗಳಲ್ಲಿ ಖರ್ಚು ಮಾಡುತ್ತಿದ್ದಾರೆ. ಇದರಿಂದ ಕೌಟುಂಬಿಕ ನೆಮ್ಮದಿ ಹಾಳಾಗಿದೆ. ಆಗಿಂದಾಗ್ಗೆ ಕಲಹ, ಲಾಕ್‌ಡೌನ್ ಅವಧಿಯಲ್ಲಿ ಎರಡು ಹತ್ಯೆ ನಡೆದಿದೆ. ಈ ಎಲ್ಲ ವಿಚಾರ ಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಕೂಡಲೇ ಬಾರ್‌ಗಳನ್ನು ಬಂದ್ ಮಾಡಿಸಲು ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು.
ಈ ಬಗ್ಗೆ ಜೂ. 24ರಂದು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ. ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಗಿರಿಧರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಪದ್ಮನಾಭ್, ಶಿವಕುಮಾರ್, ಆನಂದ್, ನಾಗರಾಜ್ ಇತರರು ಪಾಲ್ಗೊಂಡಿದ್ದರು.