

ಮೈಸೂರು: ಮೈಸೂರು ನಗರದ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ ಎಂಬ ಆಘಾತಕಾರಿ ಅಂಶ ಗ್ರೀನ್ ಪೀಸ್ ಸಂಶೋಧನಾ ವರದಿಯಲ್ಲಿ ಬಹಿರಂಗಗೊಂಡಿದೆ. ವಾಯುಮಾಲಿನ್ಯದಿಂದ ನಗರದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳ ಬಗ್ಗೆ ಈ ವರದಿ ಎಚ್ಚರಿಕೆ ನೀಡಿದೆ.
ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಹಾಗು ಮಂಗಳೂರಿನಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಈ ಕೂಡಲೇ ವಾಯು ಮಾಲಿನ್ಯವನ್ನು ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜನರ ಆರೋಗ್ಯದ ಮೇಲೆ ಅದು ತೀವ್ರ ದುಷ್ಪರಿಣಾಮ ಬೀರಲಿದೆ ಎನ್ನಲಾಗಿದೆ.
ದಕ್ಷಿಣ ಭಾರತದ 10 ಪ್ರಮುಖ ನಗರಗಳ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳಾದ ಪಿಎಂ 2.5 (ಸೂಕ್ಷ್ಮ) ಮತ್ತು ಪಿಎಂ 10 (ಅತಿಸೂಕ್ಷ್ಮ)ಗಳ ಪ್ರಮಾಣವು ಡಬ್ಲ್ಯುಎಚ್‌ಒ ಮಾರ್ಗಸೂಚಿ ನಿಗದಿಪಡಿಸಿದ ಸರಾಸರಿ ಮಟ್ಟಗಳನ್ನು ಮೀರಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಗ್ರೀನ್‌ಪೀಸ್ ಇಂಡಿಯಾದ ‘ಸ್ಪೇರ್ ದಿ ಏರ್-2’ ವರದಿ ಎಚ್ಚರಿಸಿದೆ.
ಈ ವರದಿಯು ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು, ಮೈಸೂರು, ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣ, ಕೊಚ್ಚಿ, ಅಮರಾವತಿ, ವಿಜಯವಾಡ, ಮತ್ತು ಪುದುಚೇರಿ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ವಿಶ್ಲೇಷಿಸುತ್ತದೆ. ಈ ಹತ್ತು ನಗರಗಳ ಪೈಕಿ ವಿಶಾಖಪಟ್ಟಣಂನಲ್ಲಿ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ. ಇಲ್ಲಿನ ಗಾಳಿಯಲ್ಲಿ ಪಿಎಂ 2.5 ಕಣಗಳ ಪ್ರಮಾಣ ಡಬ್ಲ್ಯುಎಚ್‌ಒ ಮಾರ್ಗಸೂಚಿ ನಿಗದಿಪಡಿಸಿದ ಮಾನದಂಡಕ್ಕಿಂತ 10 ಪಟ್ಟು ಮತ್ತು ಪಿಎಂ 10 ಕಣಗಳ ಪ್ರಮಾಣ 9 ಪಟ್ಟು ಹೆಚ್ಚಿರುವುದು ದೃಢ ಪಟ್ಟಿದೆ.
ಅಲ್ಲದೆ ಇದು ಗಾಳಿಯ ಗುಣಮಟ್ಟ ಮಾಪಕ ನ್ಯಾಷನಲ್ ಎಂಬಿಯಂಟ್ ಏರ್ ಕ್ವಾಲಿಟಿ ಸ್ಟಾಂಡರ್ಡ್ (ಎನ್‌ಎಎಕ್ಯೂಎಸ್) ನಿಗದಿಪಡಿಸಿದ ಮಿತಿಗಳನ್ನೂ ಮೀರಿದೆ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ.
ಡಬ್ಲ್ಯುಎಚ್‌ಒ ಮಾರ್ಗಸೂಚಿಗಳೊಂದಿಗೆ ಹೋಲಿಸಿದಾಗ, ಗಾಳಿಯಲ್ಲಿ ಪಿಎಂ 2.5 ಕಣಗಳ ಮಟ್ಟವು ಮಂಗಳೂರು, ಹೈದರಾಬಾದ್, ವಿಜಯವಾಡ, ಕೊಚ್ಚಿ, ಅಮರಾವತಿ ಮತ್ತು ಚೆನ್ನೈನಲ್ಲಿ 6 ರಿಂದ 7 ಪಟ್ಟು ಹೆಚ್ಚಾಗಿದೆ. ಅದೇ ರೀತಿ, ಪಿಎಂ 10 ಕಣಗಳ ಮಟ್ಟವು ಬೆಂಗಳೂರು, ಮೈಸೂರು ಮತ್ತು ಪುದುಚೇರಿ ನಗರಗಳಲ್ಲಿ 4ರಿಂದ 5 ಪಟ್ಟುಹೆಚ್ಚಾಗಿದೆ ಎಂಬುದನ್ನು ವರದಿಯು ದೃಢಪಡಿಸಿದೆ.
ಈ ಸಂಶೋಧನಾ ತಂಡದ ನೇತೃತ್ವವನ್ನು ವಹಿಸಿದ್ದ ಸಂಶೋಧಕಿ ಆಕಾಂಕ್ಷಾ ಸಿಂಗ್, ಶುದ್ಧ ಗಾಳಿ ನಮ್ಮ ಆರೋಗ್ಯದ ಮೂಲ ಅಗತ್ಯಗಳಲ್ಲಿ ಒಂದು. ಆದರೆ ಪ್ರಸ್ತುತ ವರದಿಯು ದೇಶದ ಎಲ್ಲ ಪ್ರಮುಖ ನಗರಗಳಲ್ಲಿನ ಮಾಲಿನ್ಯಕಾರಕ ಪಿಎಂ (ಪರ್ಟಿಕ್ಯುಲೇಟ್ ಮ್ಯಾಟರ್ಸ್) ಕಣಗಳ ಮಟ್ಟವು ಡಬ್ಲ್ಯುಎಚ್‌ಒನಿಂದ ಪರಿಷ್ಕೃತ ನಿಗದಿತ ಮಾರ್ಗಸೂಚಿ ಮೀರಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಅಧ್ಯಯನವು ಗಾಳಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಆಂಬಿಯೆಂಟ್ ಏರ್ ಕ್ವಾಲಿಟಿ ಸ್ಟ್ಯಾಂಡರ್ಸ್ (ಎನ್‌ಎಎಕ್ಯೂಎಸ್) ಮಾರ್ಗಸೂಚಿಯಲ್ಲಿ ತಿಳಿಸಲಾದ ಮಾನದಂಡ ಮೀರಿರುವ ನಗರಗಳ ಮೇಲೆ ಕೇಂದ್ರೀಕೃತವಾಗಿದೆ. ಆದರೆ, ಈಗಾಗಲೇ ನಿಗದಿಪಡಿಸಲಾದ ಮಾನದಂಡಗಳನ್ನು ಅನುಸರಿಸುತ್ತಿರುವ ನಗರಗಳನ್ನೂ ಈ ಅಧ್ಯಯನಕ್ಕೆ ಒಳಪಡಿಸುವುದು ಅಗತ್ಯವಾಗಿದೆ. ಈ ನಗರಗಳಲ್ಲಿನ ಗಾಳಿಯ ಗುಣಮಟ್ಟವನ್ನು ಅದು ನಿಗದಿಪಡಿಸಿದ ಮಾನದಂಡಗಳನ್ನು ಮೀರುವ ಮುಂಚಿತವಾಗಿಯೇ ಕಾಪಾಡಿಕೊಳ್ಳುವುದು ಅಗತ್ಯ ಎಂದೂ ಆಕಾಂಕ್ಷಾ ಸಿಂಗ್ ಎಚ್ಚರಿಸಿದ್ದಾರೆ.
ಗ್ರೀನ್‌ಪೀಸ್ ಇಂಡಿಯಾದ ಪ್ರಚಾರಕಿ ಸೆಲೋಮಿ ಗಾರ್ನಾಯಕ್ ಅವರು ದಕ್ಷಿಣ ಭಾರತದ ಪ್ರಮುಖ ಹತ್ತು ನಗರಗಳಲ್ಲಿ ಮಾಲಿನ್ಯಕಾರಕಗಳಾದ ಪಿಎಂ 2.5 ಮತ್ತು ಪಿಎಂ 10 ಕಣಗಳ ಮಿತಿ ಮೀರುವಿಕೆಯ ಪ್ರಮಾಣವು ನಗರಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಕಟುವಾಸ್ತವತೆ ತೆರೆದಿಡುತ್ತಿದೆ.
ಈ ವರದಿಯು ಪ್ರಸ್ತುತ ವಾಯುಮಾಲಿನ್ಯದ ಬಿಕ್ಕಟ್ಟು ಕೇವಲ ಉತ್ತರ ಭಾರತದ ನಗರಗಳನ್ನು ಮಾತ್ರವಲ್ಲ, ಇಡೀ ದೇಶವನ್ನು ಒಳಗೊಳ್ಳುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ.