ಮೈಸೂರು ಬಂದ್ ವಿದ್ಯಾರ್ಥಿಗಳ ಪರದಾಟ

mysore
Published on

ಮೈಸೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿ ಕರೆ ನೀಡಿದ್ದ ಮೈಸೂರು ಬಂದ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರದಾಡಿದರು.

ನಗರದಲ್ಲಿ ಬಹುತೇಕ ಎಲ್ಲ ಶಾಲಾ, ಕಾಲೇಜುಗಳು ಎಂದಿನಂತೆ ಪ್ರಾರಂಭಗೊಂಡವು. ಆದರೆ, ಬಂದ್ ತೀವ್ರಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಜೆ ನೀಡಿ ಕಳುಹಿಸಲಾಯಿತು. ಕೆಲವು ಶಾಲಾ, ಕಾಲೇಜುಗಳಿಗೆ ಒಂದು ತರಗತಿಗಳು ನಡೆಯಿತು. ಶಾಲಾ ಆಡಳಿತ ಮಂಡಳಿಗಳು ರಜೆ ಘೋಷಿಸಿದರೂ ವಿದ್ಯಾರ್ಥಿಗಳು ಮನೆಗೆ ತೆರಳಲು ಬಸ್ ಇಲ್ಲದೆ ಪರದಾಡಿದರು. ಸಾಕಷ್ಟು ವಿದ್ಯಾರ್ಥಿಗಳು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯ್ದುಕೊಂಡು ನಿಂತಿದ್ದ ದೃಶ್ಯಗಳು ಕಂಡುಬಂತು. ನಗರ ಪ್ರದೇಶದಲ್ಲಿರುವ ಮಕ್ಕಳನ್ನು ಅವರ ಪಾಲಕರು ತಮ್ಮ ವಾಹನಗಳಲ್ಲಿ ಕರೆದೊಯ್ದರು. ಆದರೆ, ಗ್ರಾಮಾಂತರದಿಂದ ಆಗಮಿಸಿದ ವಿದ್ಯಾರ್ಥಿಗಳು ಸಂಜೆವರೆಗೆ ಕಾಯ್ದು ನಂತರ ಮನೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ, ನಗರದ ಹೊರ ವಲಯದಲ್ಲಿನ ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net