

ಮೈಸೂರು: ಇಂಡಿಯಾ ಟ್ರಾವೆಲ್ ಮಾರ್ಕೆಟ್ ಎಕ್ಸಿಬಿಷನ್ಸ್(ಐಟಿಎಂಇ) ನಗರದ ಹುಣಸೂರು ರಸ್ತೆಯ ಲೆ ರುಚಿ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಪ್ರವಾಸೋದ್ಯಮ ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಮೈಸೂರು ರಾಜ್ಯದ ಚಾರಿತ್ರಿಕ ನಗರಗಳಲ್ಲಿ ಒಂದಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜಿಲ್ಲೆಯಲ್ಲಿ ಮೈಸೂರು ಅರಮನೆ, ಮೃಗಾಲಯ ಸೇರಿದಂತೆ ಹಲವು ಪ್ರವಾಸಿ ತಾಣಗಳು ಇವೆ ಎಂದು ಹೇಳಿದರು.
ಜಿಲ್ಲೆಗೆ ಪ್ರತಿ ವರ್ಷ 40 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಎಲ್ಲ ಋತುಮಾನಗಳಲ್ಲೂ ಜಿಲ್ಲೆಯಲ್ಲಿ ಪ್ರವಾಸಿ ಕೈಗೊಳ್ಳಲು ಸೂಕ್ತವಾದ ವಾತಾವರಣ ಇದೆ. ಹಾಗಾಗಿ ಇಂತಹ ಜಾಗದಲ್ಲಿ ಪ್ರವಾಸೋದ್ಯಮ ಪ್ರದರ್ಶನಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಜುಪಿಟರ್ ಟ್ರಾವೆಲ್ ಎಕ್ಸಿಬಿಷನ್ಸ್ ನಿರ್ದೇಶಕ ಟಿ.ಜೆ.ಪಿ. ರಾಜು ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಜಿಲ್ಲೆಯಲ್ಲಿ ವಿಪುಲವಾದ ಅವಕಾಶಗಳು ಇವೆ. ಜಿಲ್ಲೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಪ್ರತಿ ವರ್ಷ ಶೇ.20 ರಷ್ಟು ಹೆಚ್ಚಾಗುತ್ತಿದೆ. ಪ್ರವಾಸೋದ್ಯಮವು ಜಿಲ್ಲೆಯ ಅರ್ಥ ವ್ಯವಸ್ಥೆಗೆ, ಆತಿಥ್ಯ ಕ್ಷೇತ್ರ ಶೇ.25 ರಷ್ಟು ಕೊಡುಗೆ ನೀಡುತ್ತಿದೆ ಎಂದರು.
ಭವಿಷ್ಯದ ಪ್ರವಾಸೋದ್ಯಮ ಸ್ವರೂಪವನ್ನು ರೂಪಿಸಲು ಮೈಸೂರು ಮಹತ್ವದ ಪಾತ್ರ ವಹಿಸುತ್ತಿದೆ. ಆಧುನಿಕತೆ ಮತ್ತು ಇತಿಹಾಸ ಸಂಗಮಿಸುವ ಅಪರೂಪದ ಸ್ಥಳ ಇದಾಗಿದೆ. ಹಾಗಾಗಿ ಪ್ರವಾಸೋದ್ಯಮ ಮೇಳಕ್ಕೆ ಮೈಸೂರು ಪ್ರಶಸ್ತವಾಗಿದೆ ಎಂದು ಅಭಿಪ್ರಾಯಪಟ್ಟರು.
ಮೇಳದಲ್ಲಿ ಕರ್ನಾಟಕ, ಕೇರಳ, ಚಂಡಿಗಢ, ಗೋವಾ, ತಮಿಳುನಾಡು, ಪುದುಚೇರಿ, ದೆಹಲಿ, ಅಂಡಮಾನ್ ರಾಜ್ಯಗಳು, ನೇಪಾಳ ಮತ್ತು ಥಾಯ್ಲೆಂಡ್ ದೇಶದ ಪ್ರವಾಸೋದ್ಯಮ ಕ್ಷೇತ್ರದ ಪಾಲುದಾರರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಟ್ರಾವೆಲ್ ಏಜೆಂಟರು, ಟೂರ್‌ಆಪರೇಟರ್‌ಗಳು, ಕಾರ್ಪೊರೆಟ್ ಖರೀದಿದಾರರು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದ ಎಲ್ಲ ಪಾಲುದಾರರು ಭಾಗಹಿಸಿದ್ದಾರೆ. ಇವರೆಲ್ಲರ ನಡುವೆ ಜಾಲ ಸೃಷ್ಟಿಸಿ ಪ್ರವಾಸೋದ್ಯಮ ಬೆಳೆಸುವ ಗುರಿಯನ್ನು ಮೇಳ ಹೊಂದಿದೆ.
ಮೇಳದಲ್ಲಿ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಸೇಫ್‌ವೀಲ್ಸ್ ಮಾಲೀಕ ಬಿ.ಎಸ್. ಪ್ರಶಾಂತ್, ಮೈಸೂರು ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಸಿ.ಟಿ. ಜಯಕುಮಾರ್ ಹಾಗೂ ಇತರರು ಇದ್ದರು.