

ಮೈಸೂರು: ರಾಜೇಂದ್ರನಗರದ ಸಿಂಗರಿಶೆಟ್ಟಿ ಕಲ್ಯಾಣಿಯ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಬುಧವಾರ ಎರಡು ಗುಂಪುಗಳ ನಡುವೆ ಕಾವೇರಿದ ಮಾತಿನ ಚಕಮಕಿ ನಡೆದು ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸಿಂಗರಿಶೆಟ್ಟಿ ಕಲ್ಯಾಣಿಯ ಪುನರುಜ್ಜೀವನ ಮಾಡುವ ಉದ್ದೇಶದಿಂದ ಎನ್.ಆರ್. ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಬುಧವಾರ ಸ್ಥಳಕ್ಕೆ ಭೇಟಿ ನೀಡಿದರು. ನೂರು ವರ್ಷ ಇತಿಹಾಸವಿರುವ ಮಂಟಪ ಹಾಗೂ ಕಲ್ಯಾಣಿಯ ಸ್ವಚ್ಚತಾ ಕಾರ್ಯ ಮಾಡಬೇಕು. ಈ ಕುರಿತು ಪಾಲಿಕೆ ಹಾಗೂ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕಲ್ಯಾಣ ಬಳಿ ಇರುವ ಅನಧಿಕೃತ ಶೆಡ್‌ಗಳನ್ನು, ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು.
ಬಿಜೆಪಿ ನಾಯಕರು ಕಲ್ಯಾಣ ಪರಿಶೀಲನೆ ವೇಳೆ ಸ್ಥಳಕ್ಕೆ ಆಗಮಿಸಿದ ಗುಂಪೊಂದು ವಾಗ್ವಾದಕ್ಕೆ ಇಳಿಯಿತು. ಹೀಗಾಗಿ ಸ್ಥಳದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ ಾಗಿತ್ತು. ಸ್ಥಳಕ್ಕೆ ಎನ್.ಆರ್. ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಎರಡು ಗುಂಪುಗಳ ಸದಸ್ಯರನ್ನು ಚದುರಿಸಿದರು.
ಬಿಜೆಪಿ ನಾಯಕರು ಕಲ್ಯಾಣಿ ವಿಚಾರವಾಗಿ ಅನಗತ್ಯ ಗೊಂದಲ ನಿರ್ಮಾಣ ಮಾಡುವ ಮೂಲಕ ಧರ್ಮ ಸಂಘರ್ಷವನ್ನು ಉಂಟು ಮಾಡುತ್ತಿದ್ದಾರೆ. ಇಲ್ಲಿ ಹಿಂದು, ಮುಸ್ಲಿಂ ಎಲ್ಲರು ಶಾಂತಿಯುತವಾಗಿ ಜೀವನ ನಡೆಸುತ್ತಿದ್ದಾರೆ. ಆದರೆ, ಬಿಜೆಪಿಯವರು ಅನಗತ್ಯ ಗೊಂದಲ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಇದು ಸರ್ಕಾರಿ ಜಾಗವಾಗಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸುತ್ತಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಜಾತಿಗಳ ನಡುವೆ ಸಂಘರ್ಷ ಮೂಡಿಸುವುದು ಸರಿಯಲ್ಲ ಎಂದು ಸ್ಥಳೀಯ ನಿವಾಸಿ ನೂರ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ಎಚ್.ಜಿ. ಗಿರಿಧರ್, ಕಲ್ಯಾಣಿ ಉಳಿಯಬೇಕು ಎಂಬುದಷ್ಟೇ ನಮ್ಮ ನಿಲುವಾಗಿದೆ. ನಮಗೆ ಯಾವುದೇ ಗಲಬೆ ಸೃಷ್ಟಿ ಮಾಡುವ ಉದ್ದೇಶವಿಲ್ಲ. ನಾವು ಹಿಂದು- ಮುಸ್ಲಿಂ ಎಂಬ ವಿಚಾರವನ್ನು ತರುತ್ತಿಲ್ಲ. ಕಲ್ಯಾಣಿ ಉಳಿಯಬೇಕು ಹಾಗೂ ಅದರ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕು. ಈ ಕುರಿತು ಅಧಿಕಾರಿಗಳ ಗಮನ ಸೆಳೆದಿದ್ದೇವೆ. ವಿರೋಧವಿದ್ದರೆ ನೀವು ಸಹ ಅಧಿಕಾರಿಗಳಿಗೆ ಮನವಿ ನೀಡಿ ಎಂದರು.
ಶತಮಾನದ ಇತಿಹಾಸವಿರುವ ಕಲ್ಯಾಣಿ ಮುಚ್ಚಿ ಹೋಗಿದೆ. ಈ ಕಲ್ಯಾಣಿಯನ್ನು ಸಿಂಗರಿಶೆಟ್ಟಿ ಕೊಳ ಎಂದು ಕರೆಯಲಾಗುತಿತ್ತು. ಇಲ್ಲಿಂದ ದೇವರ ಪೂಜೆಗೆ ನೀರನ್ನು ಶಿವಾಜಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಈಗ ಕೊಳವನ್ನು ಮುಚ್ಚಿ ಮಂಟಪದ ಸುತ್ತ ಮುತ್ತ ಮೀನು ಮತ್ತು ಮಾಂಸದ ಅಂಗಡಿಗಳನ್ನು ಅನಧಿಕೃತವಾಗಿ ತೆರೆದು ಕೊಳದ ಪರಿಸರವನ್ನು ಅಪವಿತ್ರಗೊಳಿಸಲಾಗಿದೆ. ಮಂಟಪದ ಸುತ್ತ ಮುತ್ತ ಇರುವ ಅನಧಿಕೃತ ಅಂಗಡಿಗಳನ್ನು ಖಾಲಿ ಮಾಡಿಸಬೇಕು. ಇಲ್ಲವಾದಲ್ಲಿ ಮುಂದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಲ್ಯಾಣಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ನಗರ ಪಾಲಿಕೆ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಕಲ್ಯಾಣಿ ಅಭಿವೃದ್ಧಿ ಪಡಿಸಬೇಕು ಎಂದು ನಾವು ಕೇಳುತ್ತಿರುವುದೇ ತಪ್ಪೇ? ನಾವು ನ್ಯಾಯ ಕೇಳಬಾರದೇ? ನ್ಯಾಯ ಕೇಳಲು ಬಂದ ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಹಾಗಾದರೆ ಇಲ್ಲಿ ಯಾರು ಹಿಂದುಗಳು ಬದುಕುವಂತೆ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಒಂದು ವಾರದ ಒಳಗೆ ಕಲ್ಯಾಣಿ ಒತ್ತುವರಿಗೆ ತೆರವುಗೊಳಿಸಿ ಹಿಂದುಗಳಿಗೆ ಕಲ್ಯಾಣಿಯನ್ನು ನೀಡಬೇಕು. ನಾವು ಕಲ್ಯಾಣಿಯನ್ನು ಅಭಿವೃದ್ಧಿಗೊಳಿಸಿ ಪೂಜೆ ಮಾಡುತ್ತೇವೆ ಎಂದು ಹೇಳಿದರು.