ಸನ್ನದು ಶುಲ್ಕ ಹೆಚ್ಚಳ ಮಾಡದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘದಿಂದ ಒತ್ತಾಯ

Published on

ಮೈಸೂರು: ಚಿಲ್ಲರೆ ಮದ್ಯ ಮಾರಾಟದ ಮೇಳೆ ಕನಿಷ್ಠ ಶೇ.20 ಲಾಭಾಂಶ ನೀಡಬೇಕು, ಹೆಚ್ಚುವರಿ ಅಬಕಾರಿ ಶುಲ್ಕ ಕಡಿಮೆ ಮಾಡಬೇಕು ಎನ್ನುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘದ ಅಧ್ಯಕ್ಷ ಎಸ್.ಗುರುಸ್ವಾಮಿ ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಸನ್ನದುಗಳ ಸಂಖ್ಯೆ ಮಾತ್ರ ಹೆಚ್ಚಳ ಆಗಿರುವುದನ್ನು ಬಿಟ್ಟರೆ ಮದ್ಯ ಮಾರಾಟ ಗಣನೀಯವಾಗಿ ವೃದ್ಧಿಯಾಗಿಲ್ಲ. ಇದರಿಂದಾಗಿ ಮದ್ಯಮಾರಾಟಗಾರರಿಗೆ ಲಾಭ ಬರುತ್ತಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಸನ್ನದು ಶುಲ್ಕ ಹೆಚ್ಚಳ ಮಾಡಬಾರದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಅಬಕಾರಿ ನೀತಿಯಲ್ಲಿ ಕೆಲವೊಂದು ಬದಲಾವಣೆ ಮಾಡುವ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ, ಯಾವುದೇ ಬದಲಾವಣೆ ಮಾಡಬಾರದು. ಸಿಎಲ್-2ಗಳಲ್ಲಿ ಮದ್ಯ ಸೇವಿಸಲು ಅವಕಾಶ ನೀಡಬೇಕು. ಇದರಿಂದ ದುಬಾರಿ ಹೋಟೆಲ್‌ಗಳಿಗೆ ಹೋಗಲು ಸಾಧ್ಯವಾಗದವರಿಗೆ ಅನುಕೂಲವಾಗಲಿದೆ. ಇದರೊಡನೆ ಹಲವರಿಗೆ ಲಂಚ ನೀಡಬೇಕಾಗಿ ಬಂದಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು.

ಸಂಘದ ಪದಾಧಿಕಾರಿಗಳಾದ ಲಕ್ಷ್ಮಣ್, ಕೆ.ಎಸ್.ಮುರಳಿ, ಎಂ.ಶ್ರೀನಿವಾಸ್, ಕೆ.ಪಿ.ಪರಮೇಶ್, ಭಾಸ್ಕರ್ ಎಲ್.ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net