

ಮಂಡ್ಯ: ಮೈಸೂರು ಆಕಾಶವಾಣಿ 90 ವರ್ಷ ಪೂರೈಸಿರುವ ಹಿನ್ನಲೆ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಅದರಂತೆ ಫೆ.7ರಂದು ಬೆಳಗ್ಗೆ 10ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮೈಸೂರು ಆಕಾಶವಾಣಿ-90 ಭಾವ ಜನಪದ ರಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಆಕಾಶವಾಣಿ ಉಪನಿರ್ದೇಶಕ ಎಸ್.ಎಸ್.ಉಮೇಶ್ ತಿಳಿಸಿದರು.
ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಪ್ರತಿಭೆಗಳನ್ನು ಪೋಷಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ತಿಂಗಳು ಇದೇ ರೀತಿಯ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಲಾಗುವುದು. ಅಂದಿನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಆಕಾಶವಾಣಿ ಸಹಾಯಕ ನಿರ್ದೇಶಕರಾದ ಅಬ್ದುಲ್ ರಶೀದ್, ಟಿ.ವಿ.ವಿದ್ಯಾಶಂಕರ್, ಸಹಾಯಕ ಇಂಜಿನಿಯರ್ ಪಿ.ಆನಂದ್ ಉಪಸ್ಥಿತರಿರಲಿದ್ದು, ಉಪನಿರ್ದೇಶಕ ಎಸ್.ಎಸ್.ಉಮೇಶ್ ಅಧ್ಯಕ್ಷತೆ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸಹಾಯಕ ನಿರ್ದೇಶಕ ಟಿ.ವಿ.ವಿದ್ಯಾಶಂಕರ್, ಹಿರಿಯ ಉದ್ಘೋಷಕ ಮೈಸೂರು ಉಮೇಶ್ ಇದ್ದರು.