

ಮೈಸೂರು: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3.5 ಕಿ.ಮೀ. ರನ್ ವೇ ನಿರ್ಮಾಣ ಮಾಡಲಾಗಿದೆ. ಶಿವಮೊಗ್ಗಕ್ಕೆ ಹೋಲಿಕೆ ಮಾಡಿದರೆ ಮೈಸೂರಿನ ಬೆಳವಣಿಗೆಯ ವೇಗ ಹೆಚ್ಚು ಇರುವ ಹಿನ್ನೆಲೆಯಲ್ಲಿ ಮೈಸೂರು ವಿಮಾನ ನಿಲ್ದಾಣದಲ್ಲೂ 3.5 ಕಿ.ಮೀ. ರನ್ ವೇ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕೆ ಪ್ರತ್ಯೇಕವಾಗಿ 91 ಎಕರೆ ಜಾಗ ಭೂ ಸ್ವಾಧೀನ ಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಹಾಗೂ ಬದಲಾದ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು.
91 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಪ್ರಸ್ತಾವನೆ ಕಳುಹಿಸಲಾಗುವುದು. ಇದಾದ ನಂತರ 91 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಈಗಾಗಲೇ 1.75 ರಿಂದ 2.75 ಕಿ.ಮೀ. ರನ್‌ವೇ ವಿಸ್ತರಣೆಗೆ ಯೋಜನೆ ರೂಪಿಸಲಾಗಿದ್ದು, ಈ ಯೋಜನೆ ಮೂರ‌್ನಾಲ್ಕು ತಿಂಗಳ ಒಳಗೆ ಪ್ರಾರಂಭಗೊಳ್ಳಲಿದೆ. 2.75 ಕಿ.ಮೀ. ರನ್ ವಿಸ್ತರಣೆ ಪೂರ್ಣಗೊಂಡ ಬಳಿಕ 2.75 ರಿಂದ 3.5 ಕಿ.ಮೀ. ರನ್‌ವೇ ವಿಸ್ತರಣೆಯನ್ನು ಎರಡನೇ ಹಂತದಲ್ಲಿ ಕೈಗೊಳ್ಳಲಾಗುವುದು ಎಂದು ವಿವರಿಸಿದರು.