ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆಗೆ ಜನವರಿಯಲ್ಲಿ ಚಾಲನೆ

Mysore Airport
Published on

ಮೈಸೂರು: ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಜನವರಿಯಲ್ಲಿ ಚಾಲನೆ ನೀಡಲು ಶುಕ್ರವಾರ ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆ ಯಲ್ಲಿ ಹಮ್ಮಿಕೊಂಡ ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಸ್ತುತ ರನ್‌ವೇ 1.75 ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಮೊದಲ ಹಂತದಲ್ಲಿ ರನ್‌ವೇಯನ್ನು 1.75 ಕಿ.ಮೀ.ನಿಂದ 2.75 ಕಿ.ಮೀ. ವಿಸ್ತರಿಸಲಾಗುವುದು. ಎರಡನೇ ಹಂತದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿಯಲ್ಲಿ 3.5 ಕಿ.ಮೀ.ಗೆ ರನ್‌ವೇ ವಿಸ್ತರಣೆ ಮಾಡಲು ಮೊತ್ತೊಂದು ಯೋಜನೆ ರೂಪಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

2.75 ಕಿ.ಮೀ. ರನ್‌ವೇ ವಿಸ್ತರಣೆಗೆ ಒಟ್ಟು 240 ಎಕರೆ ಖಾಸಗಿ ಹಾಗೂ ಸರ್ಕಾರಿ ಜಾಗವನ್ನು ಭೂ ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಿ ಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಗೆ 150 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ 160 ಎಕರೆ ಖಾಸಗಿ ಜಾಗವನ್ನು ಭೂ ಸ್ವಾಧೀನ ಮಾಡಲಾಗಿದ್ದು, ಉಳಿಕೆ 46.22 ಎಕರೆ ಖಾಸಗಿ ಜಾಗದ ಭೂ ಸ್ವಾಧೀನಕ್ಕೆ 90 ಕೋಟಿ ರೂ. ಅವಶ್ಯಕತೆ ಇದ್ದು, ಇದಕ್ಕೆ ಫೈನಲ್ ನೋಟಿಫಿಕೇಷನ್ ಆಗಬೇಕಾಗಿದೆ. ಈ ಕಡತ ಇದೀಗ ಹಣಕಾಸು ಇಲಾಖೆಯ ಮುಂದಿದ್ದು, ಪ್ರತಿ ಎಕರೆಗೆ 1.50 ಕೋಟಿ ರೂ. ಪರಿಹಾರ ನೀಡಲಾಗುವುದು. ರನ್‌ವೇ ವಿಸ್ತರಣೆಗೆ ಗುರುತಿಸಿರುವ ಜಾಗದಲ್ಲಿ ಕಾಲುವೆ ಹಾದು ಹೋಗಿದ್ದು, ಅದಕ್ಕೆ ಪರಿಹಾರವಾಗಿ 76 ಕೋಟಿ ರೂ., ಕೆಪಿಟಿಸಿಎಲ್‌ಗೆ 68 ಕೋಟಿ ರೂ. ಪರಿಹಾರ ನೀಡಬೇಕಾಗಿದ್ದು, ರಾಜ್ಯ ಸರ್ಕಾರ ಪರಿಹಾರ ನೀಡಲಿದೆ ಎಂದರು.

2ನೇ ಹಂತದ ವಿಸ್ತರಣೆ: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3.5 ಕಿ.ಮೀ. ರನ್ ವೇ ನಿರ್ಮಾಣ ಮಾಡಲಾಗಿದೆ. ಶಿವಮೊಗ್ಗ ಮಾದರಿಯಲ್ಲಿ ಮೈಸೂರು ವಿಮಾನ ನಿಲ್ದಾಣದಲ್ಲೂ 3.5 ಕಿ.ಮೀ. ರನ್ ವೇ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕೆ ಎರಡನೇ ಹಂತದ ರನ್‌ವೇ ವಿಸ್ತರಣೆ ಸಂದರ್ಭ ಪ್ರತ್ಯೇಕವಾಗಿ 91 ಎಕರೆ ಜಾಗ ಭೂ ಸ್ವಾಧೀನ ಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

91 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಪ್ರಸ್ತಾವನೆ ಕಳುಹಿಸಲಾಗುವುದು. ಇದಾದ ನಂತರ 91 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 1.75 ರಿಂದ 2.75 ಕಿ.ಮೀ. ರನ್‌ವೇ ವಿಸ್ತರಣೆ ಮಾಡಲಾಗುವುದು. 2.75 ಕಿ.ಮೀ. ರನ್ ವಿಸ್ತರಣೆ ಪೂರ್ಣ ಗೊಂಡ ಬಳಿಕ 2.75 ರಿಂದ 3.5 ಕಿ.ಮೀ. ರನ್‌ವೇ ವಿಸ್ತರಣೆ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತರಕಾರಿ ಹಾಗೂ ಹೂ ಗಳನ್ನು ಬೆಳೆಯಲಾಗುತ್ತಿದೆ. ರನ್‌ವೇ ವಿಸ್ತರಣೆಯಾದರೆ ಕಾರ್ಗೋ ವಿಮಾನಗಳ ಸೇವೆ ಪ್ರಾರಂಭವಾಗಲಿದೆ. ಹೀಗಾಗಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ಕಾಯ್ದಿರಿಸಬೇಕು. ವಿಮಾನ ನಿಲ್ದಾಣಕ್ಕೆ ನಗರ ಬಸ್ ನಿಲ್ದಾಣದ ಬಸ್ ಸೇವೆ ಒದಗಿಸಲು ಕ್ರಮ ವಹಿಸಲಾಗುವುದು. ಬಸ್ ಸೇವೆ ಆರಂಭಿಸಿದ ನಂತರ ಜನರ ಸ್ಪಂದನೆ ಯಾವ ರೀತಿ ಇದೆ ಎಂಬ ಮಾಹಿತಿ ನೀಡುವಂತೆ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸೂಚಿಸಿ ದರು.

ವಿಮಾನ ನಿಲ್ದಾಣದ ಬಳಿಯಲ್ಲಿ ಮೈಸೂರು-ಚಾಮರಾಜನಗರ ರೈಲು ಮಾರ್ಗ ಹಾದು ಹೋಗಿರುವ ಹಿನ್ನೆಲೆಯಲ್ಲಿ ರೈಲ್ವೆ ವಿದ್ಯುದ್ದೀ ಕರಣ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ 2 ಕಿ.ಮೀ. ರೈಲು ಮಾರ್ಗ ತಿರುವು ಮಾಡಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಕೆಐಎಡಿಬಿ ಭೂ ಸ್ವಾಧೀನ ಅಧಿಕಾರಿ ಪ್ರಿಯದರ್ಶಿನಿ, ಶಾಸಕ ಜಿ.ಟಿ. ದೇವೇಗೌಡ, ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಅನೂಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net