

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ನಿಯುಕ್ತಿಯಾಗಿ ಬಂದ ಸಿಂಧೂರಿ, 40 ದಿನ ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಅತಿಥಿ ಗೃಹದಲ್ಲಿ ಉಳಿದಿದ್ದರು. ಬಳಿಕ ಜಿಲ್ಲಾಧಿಕಾರಿ ನಿವಾಸಕ್ಕೆ ತೆರಳುವಾಗ ಗೆಸ್ಟ್ ಹೌಸ್ನಿಂದ ಟೆಲಿಫೋನ್ ಟೇಬಲ್, ಮರದ ಕುರ್ಚಿ, ಮೈಕ್ರೋ ವೆವನ್, ಮಂಚ, ಹಾಸಿಗೆ, ಯೋಗಾ ಮ್ಯಾಟ್... ಹೀಗೆ 12 ಸಾಮಗ್ರಿಯನ್ನೂ ತೆಗೆದುಕೊಂಡು ಹೋಗಲಾಗಿದೆ. ವಾಪಸ್ ಕೊಡಿ ಎಂದು ಮೂರು ಬಾರಿ ಪತ್ರ ಬರೆದರೂ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪ ಕೇಳಿಬಂದಿದೆ.
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಅತಿಥಿ ಗೃಹದ ಸಾಮಗ್ರಿಗಳನ್ನು ಜಿಲ್ಲಾಧಿಕಾರಿಗಳ ವಸತಿ ಗೃಹಕ್ಕೆ ನಿಮ್ಮ ಸಿಬ್ಬಂದಿ ತೆಗೆದುಕೊಂಡು ಹೋಗಿದ್ದರು. ಅವುಗಳನ್ನು ವಾಪಸ್ ಕೊಡಿ ಎಂದು 2020ರಿಂದ ಮೂರು ಬಾರಿ ಆಡಳಿತ ತರಬೇತಿ ಸಂಸ್ಥೆಯ ಅಧಿಕಾರಿಗಳು ಪತ್ರ ಬರೆದಿದ್ದರು. ಆದರೆ ರೋಹಿಣಿ ಸಿಂಧೂರಿ ಅವರಿಂದ ಈ ಪತ್ರಗಳಿಗೆ ಯಾವ ಪ್ರತಿಕ್ರಿಯೆಯೂ ಬಂದಿಲ್ಲವಂತೆ. ಈಗ ಮೈಸೂರು ಜಿಲ್ಲಾಧಿಕಾರಿಗೆ ಮತ್ತೊಂದು ಪತ್ರ ಬರೆದ ಆಡಳಿತ ತರಬೇತಿ ಸಂಸ್ಥೆ ಅಧಿಕಾರಿಗಳು, ಗೆಸ್ಟ್ಹೌಸ್ನ ಸಾಮಗ್ರಿಗಳು ಡಿಸಿ ನಿವಾಸದಲ್ಲಿ ಇದ್ದಲ್ಲಿ ವಾಪಸ್ ಕೊಡಿ ಎಂದು ಮನವಿ ಮಾಡಿದ್ದಾರೆ.