

ಮೈಸೂರು: ತಿ.ನರಸೀಪುರ ತಾಲೂಕಿನ ಕುರುಬೂರಿನಲ್ಲಿ ಸೋಮವಾರ ಖಾಸಗಿ ಬಸ್ ಹಾಗೂ ಇನ್ನೋವಾ ನಡುವೆ ಸಂಭವಿಸಿದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬದವರು ಹಾಗೂ ಗಾಯಗೊಂಡವರಿಗೆ ಪರಿಹಾರ ಘೋಷಿಸಿದ್ದಾರೆ.
ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಮೃತರ ಕುಟುಂಬಕ್ಕೆ 2 ಲಕ್ಷ ರೂ., ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ನರೇಂದ್ರ ಮೋದಿ ಘೋಷಿಸಿದ್ದಾರೆ.
ಒಬ್ಬರ ಸ್ಥಿತಿ ಗಂಭೀರ: ಅಪಘಾತದಲ್ಲಿ ಗಾಯಗೊಂಡ ಐವರಿಗೆ ನಗರದ ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ಬಳ್ಳಾರಿಯ ಜನಾರ್ದನ್ ಸ್ಥಿತಿ ಗಂಭೀರವಾಗಿದ್ದು, ಉಳಿದ ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲರಿಗೂ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಳ್ಳಾರಿಯ ಶಶಿಕುಮಾರ್, ಮೈಸೂರಿನ ಬಾನು ಕೆ.ಆರ್. ಆಸ್ಪತ್ರೆಯಲ್ಲಿ, ಮಕ್ಕಳಾದ ಬಳ್ಳಾರಿಯ ಪುನೀತ್ ಹಾಗೂ ಮೈಸೂರಿನ ಗೌರವ್ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಸೋಮವಾರ ರಾತ್ರಿಯೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಒಟ್ಟು 6 ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಸೋಮವಾರ ಬೆಳಗ್ಗಿನ ಜಾವ 2.30ಕ್ಕೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.