ಮೈಸೂರು: ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನೆ

mysore-a-felicitation-ceremony-was-held-for-award-winning-journalists
Published on

ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಗರದ ಸಂಘದ ಸಭಾಂಗಣದಲ್ಲಿ ಬುಧವಾರ ದತ್ತಿ ಪ್ರಶಸ್ತಿ ಪ್ರದಾನ, ಗೌರವ ಡಾಕ್ಟರೇಟ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಮಾರಂಭ ಏರ್ಪಡಿಸಲಾಗಿತ್ತು.

ಪತ್ರಕರ್ತ ರಾಜಕುಮಾರ್ ಭಾವಸಾರ್‌ಗೆ ನಿರಂಜನ್ ನಿಕ್ಕಂ ಪ್ರಶಸ್ತಿ, ಪತ್ರಿಕಾ ಛಾಯಾಗ್ರಾಹಕ ಎಂ.ಎನ್. ಲಕ್ಷ್ಮೀನಾರಾಯಣ್ ಯಾದವ್‌ಗೆ ನೇತ್ರರಾಜು ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಮೈಸೂರು ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆದ ಹಿರಿಯ ಪತ್ರಿಕೋದ್ಯಮಿ ಡಾ.ಕೆ.ಬಿ. ಗಣಪತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಿಕಾ ವಿತರಕ ಜವರಪ್ಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ನಾಗೇಶ್ ಪಾಣತ್ತಲೆ, ದೊಡ್ಡನಹುಂಡಿ ರಾಜಣ್ಣ, ಎಸ್. ಉದಯ್ ಶಂಕರ್, ಸುತ್ತೂರು ನಂಜುಂಡ ನಾಯಕ, ಮಹೇಶ್ ಕೆಬ್ಬೇಪುರ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಕೆ.ಬಿ. ರಮೇಶ್ ನಾಯಕ, ಕೆ.ಪಿ. ನಾಗರಾಜ್, ಮೂಗೂರು ನಂಜುಂಡಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದ ಶಾಸಕ ಎಸ್.ಟಿ. ಸೋಮಶೇಖರ್, ಉಸ್ತುವಾರಿ ಸಚಿವರಾಗಿ ಮೂರು ವರ್ಷ ಮೈಸೂರು ಸೇವೆ ಮಾಡುವ ಅವಕಾಶ ತಮಗೆ ದೊರೆತಿತ್ತು. ಈ ವೇಳೆ ನನ್ನಿಂದ ಏನಾದರೂ ತಪ್ಪಾಗುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳುವಂತೆ ಗಮನಕ್ಕೆ ತರುವ ಕೆಲಸ ಇಲ್ಲಿನ ಪತ್ರಕರ್ತರು ಮಾಡುತ್ತಿದ್ದರು. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿನ ಪತ್ರಕರ್ತರು ವಿಶಿಷ್ಟರಾಗಿದ್ದಾರೆ. ಹೆಚ್ಚು ಬದ್ಧತೆಯಿಂದ ಕೆಲಸ ಮಾಡುವವರಾಗಿದ್ದಾರೆ. ಈ ಬಾರಿ ವಿಶೇಷವಾಗಿ ಪತ್ರಿಕಾ ವಿತರಕರೊಬ್ಬರಿಗೆ ರಾಜ್ಯದ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಸಂತಸದ ವಿಷಯವಾಗಿದೆ ಎಂದರು.

ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ, ಹಿರಿಯ ಪತ್ರಕರ್ತ ರಮೇಶ್ ಉತ್ತಪ್ಪ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net