

ಮೈಸೂರು: ಗೃಹ ನಿರ್ಮಾಣ, ನಿವೇಶನ ಖರೀದಿ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಒಂದೇ ಸೂರಿನಡಿ ನೀಡುವ ನಾಲ್ಕು ದಿನಗಳ ‘ಮೈ ರಿಯಾಲಿಟಿ-ರಿಯಲ್ ಎಸ್ಟೇಟ್ ಎಕ್ಸ್‌ಪೋ’ಗೆ ಶುಕ್ರವಾರ ಚಾಲನೆ ನೀಡಲಾಯಿತು.
ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯ(ಬಿಎಐ) ಮೈಸೂರು ಘಟಕ, ಕಾನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯ (ಕ್ರೆಡಾಯ್) ಮೈಸೂರು ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ (ಎಂ.ಬಿಸಿಟಿ) ಸಹಯೋಗದೊಂದಿಗೆ ಎಕ್ಸ್‌ಪೋ ಆಯೋಜಿಸಲಾಗಿದೆ.
ಮೈರಿಯಾಲ್ಟಿ 2025ರ ಪ್ರದರ್ಶನದಲ್ಲಿ 30ಕ್ಕೂ ಹೆಚ್ಚು ಮಳಿಗೆಗಳಿದ್ದು, ಪ್ಲಾಟಿನಂ, ಗೋಲ್, ಸಿಲ್ವರ್ ಮತ್ತು ರೆಗ್ಯುಲರ್ ಎಂದು 4 ವರ್ಗದ ಸ್ಟಾಲ್‌ಗಳನ್ನು ವಿಂಗಡಿಸಲಾಗಿದೆ. ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆಗಳು ಪ್ರತಿನಿತ್ಯ 10 ಗಂಟೆಯಿಂದ ರಾತ್ರಿ 8.30ರವರೆಗೆ ಗ್ರಾಹಕರಿಗೆ ಮಾಹಿತಿ ಒದಗಿಸಲಿವೆ.
ಈ ಪ್ರದರ್ಶನದ ಮೂಲಕ ರಿಯಲ್ ಎಸ್ಟೇಟ್ ಉದ್ಯಮದ ತಜ್ಞರು, ಹೂಡಿಕೆದಾರರು, ಮನೆ ಖರೀದಿದಾರರಿಗೆ ಅನುಕೂಲಕರವಾಗಲಿದೆ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವ ಇತ್ತೀಚಿನ ಟ್ರೆಂಡ್‌ಗಳು, ನಾವೀನ್ಯತೆಗಳು ಮತ್ತು ಅವಕಾಶಗಳನ್ನು ಪ್ರದರ್ಶಿಸಲಾದೆ. ಹಸಿರು ಮತ್ತು ತೆರೆದ ಸ್ಥಳಗಳಿಂದ ಹೊಸ ವಿನ್ಯಾಸವನ್ನು ಹೊಂದಿದೆ.
ಎಲ್ಲ ರಿಯಲ್ ಎಸ್ಟೇಟ್ ಡೆವಲಪರ್‌ಗಳು, ಪ್ರಮೋಟರ್‌ಗಳ ಸೇವೆ ಜತೆಗೆ ಬ್ಯಾಂಕ್‌ಗಳ (ಹಣಕಾಸು ಸಂಸ್ಥೆಗಳು) ಮಾಹಿತಿ ಒಂದೇ ಸೂರಿನಡಿ ಸಿಗಲಿದೆ. ಮಾಹಿತಿಗಾಗಿ ಮೊ.9945809000 ಅಥವಾ 9945171737 ಸಂಪರ್ಕಿಸಬಹುದು.
ಎಕ್ಸ್‌ಪೋಗೆ ಚಾಲನೆ ನೀಡಿದ ಶಾಸಕ ತನ್ವೀರ್‌ಸೇಠ್ ಮಾತನಾಡಿ, ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಿಎಐ, ಕ್ರೆಡಾಯ್, ಎಂಬಿಸಿಟಿ ಸಂಘಟನೆಗಳು ಕೇವಲ ವಹಿವಾಟಿನಲ್ಲಿ ಯಶಸ್ಸು ಕಾಣಲು ಒತ್ತು ನೀಡದೇ ಯೋಜಿತ, ಸುಂದರ ನಗರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಸದ್ಯ ನಗರಕ್ಕೆ 300 ಎಂಎಲ್‌ಡಿ ಒಳಚರಂಡಿ ನೀರು ಉತ್ಪತ್ತಿ ಅಗುತ್ತಿದ್ದು, ಅದರಲ್ಲಿ ಕೇವಲ 150 ಎಂಎಲ್‌ಡಿ ನೀರನ್ನು ಮಾತ್ರ ಶುದ್ಧೀಕರಿಸಲಾಗುತ್ತಿದೆ. ಇನ್ನುಳಿದ 150 ಎಂಎಲ್‌ಡಿ ಕೊಳಚೆ ನೀರು ನದಿ ಮೂಲಗಳಿಗೆ ಸೇರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲುಷಿತ ನೀರು ನದಿ ಸೇರುವುದನ್ನು ತಪ್ಪಿಸುವಂತೆ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು ಆಡಳಿತ ವರ್ಗದ ಮೇಲೆ ಒತ್ತಡ ತರಬೇಕು. ಗ್ರೇಟರ್ ಮೈಸೂರು ಬೇಕೋ ಬೇಡೋ ಎಂಬ ಚರ್ಚೆ ನಡೆಯುತ್ತಿದೆ 1.38 ಲಕ್ಷ ಆಸ್ತಿ ಹಸ್ತಾಂತರ ಮಾಡಿದ್ದೇವೆ. ಅದರ ಕಸ ನೀರಿನ ನಿರ್ವಹಣೆ ಮಾಡುವುದು ಹೇಗೆ ಎಂದು ಚಿಂತಿಸಬೇಕು ಎಂದರು.
ಕೇವಲ ಲೇಔಟ್ ಮಾಡುವುದರಿಂದ ಏನು ಪ್ರಯೋಜನವಾಗುವುದಿಲ್ಲ. ಪಾರ್ಕಿಂಗ್ ವ್ಯವಸ್ಥೆ ಮಾಡುವುದೇ ಈಗ ದೊಡ್ಡ ಸವಾಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಮಾಡಬೇಕು. ನಗರದಲ್ಲಿ ನೂರು ವರ್ಷ ಪೂರೈಸಿರುವ ಅನೇಕ ಕಟ್ಟಡಗಳಿವೆ. ಆದರೆ ನಮಗೆ ಅದರ ಬದಲಿ ಕಟ್ಟಡ ನಿರ್ಮಿಸುವ ಬಗ್ಗೆ ಯಾರು ಆಲೋಚನೆ ಮಾಡಿಲ್ಲ. ಅದು ಆಗುವಂತೆ ಆಲೋಚಿಸಬೇಕಿದೆ. ಮೈಸೂರಿನಲ್ಲಿ ಮೂರು ಅಂತಸ್ತಿನ ಕಟ್ಟಡ ಬಿಟ್ಟು ಮುಂದೆ ಸಾಗುತ್ತಿಲ್ಲ. ನೀವು ಧ್ವನಿ ಎತ್ತಿದಾಗ ನಮಗೆ ಜವಾಬ್ದಾರಿ ಹೆಚ್ಚುತ್ತದೆ. ಮೈಸೂರಿನಲ್ಲಿ ಬೆಂಗಳೂರಿನ ರೀತಿಯ ಒಂದು ಲಾಲ್ಬಾಗ್ ನಿರ್ಮಾಣ ಮಾಡಲು ಸಾಧ್ಯವಾಗಲಿಲ್ಲ. ಇರುವ ಚಾಮುಂಡಿ ಬೆಟ್ಟವು ಒತ್ತುವರಿಯಾಗಿ ಕಾಂಕ್ರೀಟ್ ಬೆಟ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು ಲಾಭದೊಂದಿಗೆ ಸಮಾಜಮುಖಿಯಾಗಿ ಚಿಂತನೆ ಮಾಡಬೇಕು. ಎಲ್ಲ ವರ್ಗದ ಜನರಿಗೂ ನಿವೇಶನ ಸಿಗುವಂತೆ ಕೆಲಸ ಮಾಡಬೇಕು ಎಂದು ಹೇಳಿದರು.
ಮೈಸೂರು ಪಾರಂಪರಿಕ ನಗರವಾಗಿದ್ದು, ಅದರ ಪಾವಿತ್ರೃತೆ ಕಾಪಾಡಿಕೊಳ್ಳಬೇಕು. ಸಾರ್ವಜನಿಕರಿಗೆ ಬಡಾವಣೆಗಳಲ್ಲಿ ಉತ್ತಮ ಸೌಲಭ್ಯ ನೀಡಬೇಕು. ಅಲ್ಲದೇ ನಗರದ ದೂರದೃಷ್ಟಿ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಬಿಐಎನ ಮೇಳ ಆಯೋಜನೆ ಸಮಿತಿ ಅಧ್ಯಕ್ಷ ನಂದಕುಮಾರ್ ಮಾತನಾಡಿ, ಕಳೆದ 17 ವರ್ಷಗಳಿಂದ ಈ ಮೇಳ ಆಯೋಜಿಸುತ್ತಿದ್ದು, ಒಟ್ಟು 35 ಮಳಿಗೆಗಳಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿರುವ ಇತ್ತೀಚಿನ ಟ್ರೆಂಡ್‌ಗಳು, ನಾವಿನ್ಯತೆಗಳು ಮತ್ತು ಅವಕಾಶಗಳನ್ನು ಪ್ರದರ್ಶಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬಿಎಐ ಮೈಸೂರು ಅಧ್ಯಕ್ಷ ವಿ. ಶ್ರೀನಾಥ್, ಕಾರ್ಯದರ್ಶಿ ವಿ.ಅಕ್ಷಯ್ ಕುಮಾರ್, ಕ್ರಡೈ ಅಧ್ಯಕ್ಷ ಹರೀಶ್‌ಶೆಣೈ, ಕಾರ್ಯದರ್ಶಿ ನಾಗರಾಜ್ ವಿ ಭೈರಿ, ಸಿ.ಡಿ.ಕೃಷ್ಣ ಇತರರು ಇದ್ದರು.