ಮಿಲ್ಕ್ ಪೌಡರ್, ಪನ್ನೀರ್ ಘಟಕ ಪ್ರಾರಂಭಿಸಲಿದೆ ಮೈಮುಲ್

mymul
Published on

ಮೈಸೂರು: ಮಾರುಕಟ್ಟೆಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹವಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಹಾಲನ್ನು ಮಿಲ್ಕ್ ಪೌಡರ್ ಹಾಗೂ ಪನ್ನೀರ್ ತಯಾರಿಕೆಗೆ ಬಳಕೆ ಮಾಡುವ ಉದ್ದೇಶದಿಂದ ನೂತನ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಚೆಲುವರಾಜು ತಿಳಿಸಿದರು.

ಮೈಸೂರು ಜಿಲ್ಲಾ ಹಾಲು ಒಕ್ಕೂಟ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ ಸಹಭಾಗಿತ್ವದಲ್ಲಿ ಹೊರತಂದಿರುವ ನಂದಿನಿ ದೋಸೆ, ಇಡ್ಲಿ ಹಿಟ್ಟನ್ನು ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರತಿದಿನ 9 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, 3 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಇದರ ಜತೆಗೆ ಮೊಸರು, ಮಜ್ಜಿಗೆಯಿಂದ ಒಂದು ಲಕ್ಷ ಲೀಟರ್, ಇನ್ನಿತರ ಉತ್ಪನ್ನಗಳಿಂದ 50 ಸಾವಿರ ಲೀಟರ್ ಹಾಲು ಬಳಕೆಯಾಗುತ್ತಿದೆ. ಉಳಿದ ಹಾಲನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಒಕ್ಕೂಟದಲ್ಲಿ ಪೌಡರ್ ಪ್ಲಾಂಟ್, ಪನ್ನೀರ್ ಘಟಕ ಸ್ಥಾಪನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೆಎಂಎಫ್‌ನಿಂದ ಉತ್ಪಾದನೆಯಾಗುತ್ತಿರುವ 70ಕ್ಕೂ ಹೆಚ್ಚು ಉತ್ಪನ್ನಗಳು ಮೈಸೂರು ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆ ಮಾರಾಟವಾಗುತ್ತಿದೆ. ಕೆಎಂಎಫ್ ರೈತರ ಸಂಸ್ಥೆಯಾಗಿರುವುದರಿಂದ ಮಾರುಕಟ್ಟೆಯಿಂದ ಅತಿ ಹೆಚ್ಚಿನ ಆದಾಯ ನಿರೀಕ್ಷೆ ಮಾಡುತ್ತಿಲ್ಲ. ಗ್ರಾಹಕರಿಗೆ ಉತ್ತಮ ಉತ್ಪನ್ನಗಳನ್ನು ನೀಡಲು ಕೆಎಂಎಫ್ ಕೆಲಸ ಮಾಡುತ್ತಿದೆ ಎಂದರು.

ಮೈಮುಲ್ ನಿರ್ದೇಶಕ ಸದಾನಂದ ಮಾತನಾಡಿ, ಇಂದು ಹೈನುಗಾರಿಕೆ ರೈತರಿಗೆ ಬಹಳಷ್ಟು ಅವಶ್ಯಕವಾಗಿದೆ. ಇಂದಿನ ಒತ್ತಡದ ಜೀನವದಲ್ಲಿ ಅಡುಗೆ ಮಾಡುವುದು ಕಷ್ಟವಾಗುತ್ತಿದೆ. ದೋಸೆ ಹಿಟ್ಟನ್ನು ಮೊದಲು ಹಿಂದಿನ ರಾತ್ರಿಯೇ ತಯಾರು ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಕಾಲ ಬದಲಾಗಿದ್ದು, ಜನರು ಸಮಯದ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಒತ್ತಡ ಕಡಿಮೆ ಮಾಡುವ ಸಲುವಾಗಿ ಇಡ್ಲಿ ಹಾಗೂ ದೊಸೆ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕರಾದ ಸೋಮಶೇಖರ್, ಮಹೇಶ್, ಉಮಾಶಂಕರ್, ಓಂ ಪ್ರಕಾಶ್, ದಾಕ್ಷಾಯಿಣಿ ಬಸವರಾಜು, ಲೀಲಾ ನಾಗರಾನು, ಶಿವಗಾಮಿನಿ, ಮಲ್ಲಿಕಾ ರವಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net