

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ರಥಸಪ್ತಮಿ ದಿನವಾದ ಶುಕ್ರವಾರ ಕಾರ್ಣಿಕ ನುಡಿವ ಗೊರವಯ್ಯಗೆ ಕಂಕಣ ಕಟ್ಟುವ ಮೂಲಕ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಜಾತ್ರೆಗೆ ಚಾಲನೆ ನೀಡಲಾಯಿತು.
ಮೈಲಾರ ದೇವಸ್ಥಾನದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಪ್ರಾಂಗಣದಲ್ಲಿ ಅರ್ಚಕ ಪ್ರಮೋದ ಭಟ್‌ರ ಮಂತ್ರಘೋಷ ಹಾಗೂ ಪೂಜಾ ವಿಧಿವಿಧಾನಗಳೊಂದಿಗೆ ಕಾರ್ಣಿಕ ನುಡಿಯುವ ರಾಮಣ್ಣ ಗೊರವಯ್ಯ ಹಾಗೂ ಬಾಬುದಾರರಿಗೆ ಧರ್ಮಕರ್ತರು ಕಂಕಣಕಟ್ಟಿ ಅಧಿಕೃತವಾಗಿ ಜಾತ್ರೆಗೆ ಚಾಲನೆ ನೀಡಿದರು.
ತದನಂತರ ಹಾಲು ಉಕ್ಕಿಸುವ ಕಾರ್ಯಕ್ರಮ ನಡೆಯಿತು. ಹಾಲು ಯಾವ ಭಾಗದಲ್ಲಿ ಉಕ್ಕುತ್ತದೆಯೋ ಆ ಕಡೆ ಸಮೃದ್ಧ ಮಳೆ ಬೆಳೆ ಆಗುವುದು ಎಂಬ ಪ್ರತೀತಿ ಇದೆ. ಅದರಂತೆ ಈ ಬಾರಿ ಹೊಳಲು ಭಾಗದ ಕಡೆಗೆ ಹಾಲು ಉಕ್ಕಿದ ಕಾರಣ ಉತ್ತಮ ಮಳೆ ಬೆಳೆ ಆಗಲಿದೆ ಎಂದು ಅರ್ಚಕರು ತಿಳಿಸಿದರು. ಈ ವೇಳೆ ನೆರೆದ ಭಕ್ತರರು ಏಳುಕೋಟಿ ಏಳುಕೋಟಿಗೆ ಚಾಂಗಮಲೊ ಎಂದು ಜಯ ಘೋಷ ಕೂಗಿದರು. ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್.ಪ್ರಕಾಶ ರಾವ್, ತಾಪಂ ಇಒ ಎಚ್.ಗಂಗಾಧರ ಹಾಗೂ ಸಿಬ್ಬಂದಿ ಸೇರಿದಂತೆ ಬಾಬುದಾರರು ಮತ್ತು ಗ್ರಾಮದ ಭಕ್ತರು ಹಾಜರಿದ್ದರು.