

ಹೂವಿನಹಡಗಲಿ (ಬಳ್ಳಾರಿ): ಸಂಪಾಯಿತಲೇ ಪರಾಕ್... ಇದು ಈ ವರ್ಷದ ಕಾರ್ಣಿಕ. ಪೌರಾಣಿಕ, ಐತಿಹಾಸಿಕ ಹಿನ್ನೆಲೆಯ ಮೈಲಾರದ ಡೆಂಕನ ಮರಡಿಯಲ್ಲಿ ಮಂಗಳವಾರ ನಡೆದ ಕಾರ್ಣಿಕ ನುಡಿಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.
ವಿವಿಧ ರಂಗಗಳಲ್ಲಿ ಉತ್ತಮ ಭವಿಷ್ಯ ಇದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಗಮವಾಗಿ ನಡೆಯುತ್ತದೆ. ಉತ್ತಮ ಮಳೆಯಾಗಲಿದೆ, ಬೆಳೆಗಳಿಗೆ ಉತ್ತಮ ಬೆಲೆ ದೊರೆತು ರೈತರು ಸಂಪಾಗಿರುತ್ತಾರೆ. ಉತ್ತಮ ಆರೋಗ್ಯ ಮತ್ತು ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂದು ಭಕ್ತರು ಕಾರ್ಣಿಕವನ್ನು ವಿಶ್ಲೇಷಣೆ ಮಾಡಿದರು.
ಇದಕ್ಕೂ ಮೊದಲು 11 ದಿನಗಳ ಉಪವಾಸ ವ್ರತ ಆಚರಿಸಿದ ಗೊರವಪ್ಪನನ್ನು ವಿಜಯನಗರದ ಅರಸರು ಈ ಹಿಂದೆ ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಮೂರ್ತಿಗಳೊಂದಿಗೆ ಸಿಂಹಾಸನ ಕಟ್ಟೆಯಿಂದ ಕಾರ್ಣಿಕ ಸ್ಥಳಕ್ಕೆ ಗೊರವ ಸಮೂಹ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು. ದೇವಸ್ಥಾನ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ಅಶ್ವಾರೂಢರಾಗಿ ಡೆಂಕನ ಮರಡಿಗೆ ಆಗಮಿಸಿದಾಗ ‘ಏಳು ಕೋಟಿ ಏಳು ಕೋಟಿಗೂ... ಚಹಾಂಗ ಬಲೋ’ ಎಂಬ ಹಷೋದ್ಘಾರ, ಜಯಘೊಷ ಮುಗಿಲು ಮುಟ್ಟಿತು.
ಮಂಗಳವಾರ ಸಂಜೆ 5.30ಕ್ಕೆ ಸುಕ್ಷೇತ್ರದ ಪರಂಪರೆಯ ಸಂಕೇತವಾಗಿರುವ ಬಿಲ್ಲು ಏರಿದ ಗೊರವಯ್ಯ ರಾಮಣ್ಣ, ‘ಸದ್ದಲೇ’ ಎಂದಾಗ ಡೆಂಕನ ಮರಡಿ ಸುತ್ತುವರಿದ ಭಕ್ತಗಣ ಸ್ತಬ್ಧವಾಯಿತು. ನಿಮಿಷ ಕಾಲ ಶೂನ್ಯವನ್ನು ದಿಟ್ಟಿಸಿದ ಗೊರವಯ್ಯ, ಮೇಲಿನಂತೆ ಕಾರ್ಣಿಕ ನುಡಿದು ಹಿಮ್ಮುಖವಾಗಿ ಜಿಗಿದರು. ಸುತ್ತಲೂ ನೆರೆದಿದ್ದ ಗೊರವ ಸಮೂಹ ಅವರನ್ನು ಕಂಬಳಿಯಲ್ಲಿ ಹಿಡಿದರು. ಕಳೆದ ಬಾರಿ ‘ಕಬ್ಬಿಣದ ಸರಪಳಿ ಹರಿದಿತಲೇ ಪರಾಕ್’ ಎಂಬ ದೈವವಾಣಿಯನ್ನು ಗೊರವಯ್ಯ ರಾಮಣ್ಣ ನುಡಿದಿದ್ದರು. ಅದರಂತೆ ರಾಜಕೀಯ ವಲಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಯಿತು. ಅತಿ ಮಳೆ ಯಿಂದಾಗಿ ಬೆಳೆಗಳು ಹಾಳಾದವು. ವ್ಯಾಪಾರ ವ್ಯವಹಾರ ಸರಿಯಾಗಿ ನಡೆಯಲಿಲ್ಲ.