

ಮೈಸೂರು: ಕಟ್ಟಡ ಸಾಮಗ್ರಿಗಳು, ನವೀನ ಜೀವನ ಶೈಲಿಯ ವಸ್ತುಗಳು, ಸಮೂಹ ವಸತಿ ಯೋಜನೆಗಳ ‘ಮೈಬಿಲ್ಡ್-23’ ಬೃಹತ್ ವಸ್ತುಪ್ರದರ್ಶನಕ್ಕೆ ಗುರುವಾರ ಚಾಲನೆ ದೊರೆಯಿತು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ 5 ದಿನಗಳ ಕಾಲ ನಡೆಯುವ ವಸ್ತುಪ್ರದರ್ಶನವನ್ನು ಅವಧೂತ ದತ್ತಪೀಠದ ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಉದ್ಘಾಟಿಸಿದರು. ಮೈಬಿಲ್ಡ್-23 ಸಮಿತಿಯ ಅಧ್ಯಕ್ಷ ಎಂ.ಡಿ.ಚಂದ್ರಶೇಖರ್, ಪತ್ರಕರ್ತೆ ರಶ್ಮಿ ಕೋಟಿ ಇನ್ನಿತರರು ಪಾಲ್ಗೊಂಡಿದ್ದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಘಟಕದಿಂದ ಹಮ್ಮಿಕೊಂಡಿರುವ 23ನೇ ವಾರ್ಷಿಕ ವಸ್ತುಪ್ರದರ್ಶನ ಬೆಳಗ್ಗೆ 10ರಿಂದ ಸಂಜೆ 9ರವರೆಗೆ ತೆರೆದಿರಲಿದೆ. ಪ್ರವೇಶ ಶುಲ್ಕ 20 ರೂ. ನಿಗದಿ ಪಡಿಸಲಾಗಿದೆ. ವೀಕ್ಷಕರಿಗೆ ಆಕರ್ಷಕ ಕಟ್ಟಡ ಸಾಮಗ್ರಿಗಳ ಪರಿಚಯದೊಂದಿಗೆ ಸಂಗೀತ ರಸಮಂಜರಿ, ತಿಂಡಿ-ತಿನಿಸುಗಳನ್ನು ಸವಿಯುವ ಅವಕಾಶವೂ ಇಲ್ಲಿ ಸಿಗಲಿದೆ.
ವಸ್ತುಪ್ರದರ್ಶನದಲ್ಲಿ 173 ಮಳಿಗೆ ತೆರೆಯಲಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಇತ್ತೀಚೆಗೆ ಆವಿಷ್ಕಾರಗೊಂಡಿರುವ ಸಾಮಗ್ರಿಗಳ ಸಮಗ್ರ ಪರಿಚಯವಾಗಲಿದೆ. ಸೌರಶಕ್ತಿ, ವಿದ್ಯುತ್ ಉಪಕರಣಗಳು, ಕಟ್ಟಡ ನಿರ್ಮಾಣದ ಯಂತ್ರಗಳು, ಜಲಸಂರಕ್ಷಣಾ ವಿಧಾನಗಳು, ನವೀನ ಮಾದರಿಯ ನೆಲಹಾಸುಗಳು, ಅಡುಗೆ ಮನೆ, ಸ್ನಾನದ ಮನೆಯ ಅಲಂಕಾರಿಕ ಸಾಮಗ್ರಿಗಳು, ವಿಶೇಷ ರೀತಿಯ ಛಾವಣಿ ಸಾಮಗ್ರಿಗಳು, ಹೊರಾಂಗಣ ನೆಲಹಾಸುಗಳು, ನವೀನ ರೀತಿಯ ಬಣ್ಣ, ಉತ್ಪಾದನೆಗೊಂಡ ಮರಳು ಮುಂತಾದ ಸಾಮಗ್ರಿಗಳನ್ನು ಇಲ್ಲಿ ವೀಕ್ಷಣೆ ಮಾಡಬಹುದು.
ಪ್ರತಿ ದಿನ ಸಂಜೆ 6.30ರಿಂದ ರಾತ್ರಿ 8.30ರ ವರೆಗೆ ಮನರಂಜನಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ.