ನನ್ನ ಗೆಲುವು ಕಾರ್ಯಕರ್ತರ ಶ್ರಮದ ಫಲ

mdg bjp
ಮೂಡಿಗೆರೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಸನ್ಮಾನಿಸಲಾಯಿತು. ಎಂ.ಕೆ.ಪ್ರಾಣೇಶ್, ರಂಜನ್ ಅಜಿತ್‌ಕುಮಾರ್, ದೀಪಕ್ ದೊಡ್ಡಯ್ಯ, ಎಂ.ಜೆ.ದಿನೇಶ್, ಟಿ.ಎಂ.ಗಜೇಂದ್ರ, ಡಿ.ಜೆ.ಸುರೇಶ್, ಜೆ.ಎಸ್.ರಘು ಇತರರಿದ್ದರು.
Published on

ಮೂಡಿಗೆರೆ: ಅನೇಕ ಚುನಾವಣೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೆ. ಆದರ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇನ್ನಿಲ್ಲದಂತೆ ಆತಂಕ ಸೃಷ್ಟಿಸಿತ್ತು. ಕಾರ್ಯಕರ್ತರ ಬೆಂಬಲದಿಂದ ಗೆದ್ದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬಿಜೆಪಿ ಹಾಗೂ ಜೆಡಿಎಸ್ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಇದು ನಿಜವೆಂದು ನಂಬಿದ್ದ ಮಹಿಳೆಯರು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲು ಸಾಲುಗಟ್ಟಿ ನಿಂತಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನರನ್ನು ಮರುಳು ಮಾಡಿದ್ದರಿಂದ ಗೆದ್ದಿತು. ಅದರಂತೆ ಈ ಚುನಾವಣೆಯಲ್ಲಿ ಗೆಲುವು ಕಷ್ಟವೆಂದು ನಿರ್ಧರಿಸಿದ್ದೆ. ಆದರೆ 2.50 ಲಕ್ಷ ಮತಗಳ ಲೀಡ್ ನೀಡಿದರು. ಇದರಲ್ಲಿ ಕಾರ್ಯಕರ್ತರ ಶ್ರಮವಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿಶ್ವದಲ್ಲಿ ಭಾರತ ಆರ್ಥಿಕವಾಗಿ 11ನೇ ಶಕ್ತಿಯಾಗಿತ್ತು. ಈಗ ಇಂಗ್ಲೆಂಡನ್ನು 6ನೇ ಸ್ಥಾನಕ್ಕೆ ತಳ್ಳಿ 5ನೇ ಸ್ಥಾನಕ್ಕೆ ಬಂದಿದೆ. ಇನ್ನು ಅಮೆರಿಕ ಹಾಗೂ ಚೀನಾವನ್ನು ಹಿಂದಿಕ್ಕಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಾತ್ರ ಸಾಧ್ಯ ಎಂದರು.
ಕೇಂದ್ರ ಸಂಪುಟದಲ್ಲಿ ರಾಜ್ಯದ 5 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಪಾಲು ಇನ್ನಷ್ಟು ಹೆಚ್ಚು ಸಿಗಲಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶದ ಹಳ್ಳಿಯೊಂದರರ 560 ನಿರ್ಗತಿಕ ಕುಟುಂಬಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರದಿಂದ ಮನೆ ನಿರ್ಮಿಸಿಕೊಡಲಾಗಿದೆ. ಅಲ್ಲಿ ಎಲ್ಲ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿದೆ. ಅಲ್ಲಿ ಬಿಜೆಪಿಗೆ ಸಿಕ್ಕಿರುವುದು ಕೇವಲ 7 ಮತ. ಇದರಲ್ಲಿ ಕಾಂಗ್ರೆಸಿನ ಕುತಂತ್ರ ಅಡಗಿದೆ. ಬಿಜೆಪಿ ಅಭ್ಯರ್ಥಿ ಗೆದ್ದ ಕಡೆ ಇವಿಎಂನಲ್ಲಿ ದೋಷವಿದೆ ಎನ್ನುವ ಕಾಂಗ್ರೆಸ್ ಅವರದೇ ಅಭ್ಯರ್ಥಿಗಳು ಗೆದ್ದ ಕಡೆ ಇವಿಎಂ ಬಗ್ಗೆ ಚಕಾರವೆತ್ತುವುದಿಲ್ಲ. ಬಿಜೆಪಿ ಗೆದ್ದರೆ ಸಂವಿಧಾನ ಬದಲಾಯಿಸುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮಾರಕವನ್ನು ನರೇಂದ್ರ ಮೋದಿ ಅಭಿವೃದ್ಧಿಪಡಿಸಿದ್ದನ್ನು ಕಾಂಗ್ರೆಸ್ ಹೇಳುತ್ತಿಲ್ಲ. ನನ್ನನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಸಲಾಯಿತು ಎಂದು ಕೆಲವರು ಮಾತನಾಡಿಕೊಂಡಿದ್ದರು. ನನಗೆ ಸೂಕ್ತ ಸ್ಥಾನಮಾನ ನೀಡುವುದು ಅಥವಾ ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದುಕೊಂಡಿದ್ದೆ. ಅದರಂತೆ ಉತ್ತಮ ಸ್ಥಾನಮಾನ ಪಕ್ಷ ನೀಡಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಎಂ.ಗಜೇಂದ್ರ, ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಜೆಡಿಎಶ್ ಮುಖಂಡರಾದ ಎಂ.ಎಸ್.ಬಾಲಕೃಷ್ಣೇಗೌಡ, ಜಿ.ಕೆ.ಮಂಜಪ್ಪಯ್ಯ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಕವೀಶ್, ಕೆ.ಸಿ.ರತನ್, ಎಂ.ಆರ್.ಜಗದೀಶ್, ಕೆ.ಆರ್.ಕೇಶವ, ವಿ.ಕೆ.ಶಿವೇಗೌಡ, ಡಿ.ಎಸ್.ಸುರೇಂದ್ರ, ಬಿ.ಎನ್.ಜಯಂತ್, ಎಂ.ಎನ್.ಕಲ್ಲೇಶ್, ಸುದರ್ಶನ್, ಬಸವಳ್ಳಿ ರವಿ, ಜೆ.ಎಸ್.ರಘು, ನಯನ ತಳವಾರ, ವಿನಯ್ ಹಳೆಕೋಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net