ಮೈಶುಗರ್​ಗೆ ರಾಜಕೀಯ ಮಧುಮೇಹ?

My Sugar
Published on

ಮಂಡ್ಯ: 1933ರಲ್ಲಿ ಜನಿಸಿ 1970ರ ಬಳಿಕ ಮಧುಮೇಹಕ್ಕೆ ತುತ್ತಾದ ಮೈಶುಗರ್ ಕಾರ್ಖಾನೆಗೆ ಸರ್ಕಾರ 600 ಕೋಟಿ ರೂ.ಗೂ ಅಧಿಕ ಖರ್ಚು ಮಾಡಿದರೂ ವೆಂಟಿಲೇಟರ್​ನಿಂದ ಹೊರತರಲಾಗಿಲ್ಲ. ರೈತರು ಖಾಸಗಿ ಚಿಕಿತ್ಸೆ ಕೊಡಿಸಿ ಎಂದರೆ, ಆರಂಭದಲ್ಲಿ ಖಾಸಗಿಗೆ ಜೈ ಅಂದಿದ್ದ ಶಾಸಕರು, ಸಂಘಟನೆಗಳ ಜತೆಗೂಡಿ ಈಗ ಸರ್ಕಾರಿ ಚಿಕಿತ್ಸೆಯೇ ಆಗಬೇಕೆಂದಿರುವ ಪರಿಣಾಮ ಸಿಎಂ ಅನಿವಾರ್ಯವಾಗಿ ಸರ್ಕಾರಿ ಚಿಕಿತ್ಸೆಗೆ ಮುಂದಾಗಿದ್ದಾರೆ. ಸರ್ಕಾರಿ ಆಸ್ಪತ್ರೆ ಮತ್ತೆ ಶವಾಗಾರದ ಹಾದಿ ತೋರುತ್ತದೆ ಎಂಬ ಅರಿವಿರುವ ಪ್ರಜ್ಞಾವಂತರು ಅರ್ಹ ಖಾಸಗಿ ಅವರಿಗೆ ಗುತ್ತಿಗೆ ನೀಡುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕಬ್ಬು ಬೆಳೆಗಾರರ ಜೀವನಾಡಿ, ಏಷ್ಯಾ ಖಂಡದ ಪ್ರಥಮ ಸರ್ಕಾರಿ ಸ್ವಾಮ್ಯದ ಶ್ರೀಮಂತ ಕಾರ್ಖಾನೆಯನ್ನು ಮರಣಶಯ್ಯೆಯಿಂದ ಹೊರತರಲು ಸರ್ಕಾರ 20 ವರ್ಷಗಳಿಂದ 600 ಕೋಟಿ ರೂಪಾಯಿ ಖರ್ಚು ಮಾಡಿದರೂ ನಯಾಪೈಸೆ ಲಾಭವಾಗಿಲ್ಲ. ಆ ಹಣ ಏನಾಯಿತು, ತಿಂದ ಹೆಗ್ಗಣಗಳು ಎಲ್ಲಿವೆ ಎಂಬುದರ ಬಗ್ಗೆ ಯಾವ ಸರ್ಕಾರಗಳು ಕೂಡ ಸೊಲ್ಲೆತ್ತಲಿಲ್ಲ. ಜತೆಗೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕೆಂದು ಪಟ್ಟು ಹಿಡಿದಿರುವವರು ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ.

ಕಳೆದ ಸಾಲಿನಲ್ಲಿ ಕಬ್ಬು ಖಾಲಿ ಮಾಡಲು ಹೆಣಗಾಡಿದ ರೈತರು ಮೈಶುಗರ್ ಆರಂಭಿಸಬೇಕೆಂದು ಒತಾಯಿಸಿದ್ದರಿಂದ ಹಿಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಮೈಶುಗರ್ ಜತೆಗೆ ಹೊಸ ಕಾರ್ಖಾನೆ ಸ್ಥಾಪನೆ ಮಾಡುವುದಾಗಿ ಘೊಷಿಸಿದ್ದರು.

ಸಮ್ಮಿಶ್ರ ಸರ್ಕಾರ ಪತನ ನಂತರ ಸಿಎಂ ಯಡಿಯೂರಪ್ಪ ಕಾರ್ಖಾನೆ ಆರಂಭಿಸುವ ಪ್ರಕ್ರಿಯೆ ಆರಂಭಿಸಿದರು. ಪಿಎಸ್​ಎಸ್​ಕೆ, ಹೇಮಾವತಿ ಶುಗರ್ಸ್​ಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡುವುದು ಹಾಗೂ ಮೈಶುಗರ್ ಬಗ್ಗೆ ಚರ್ಚೆ ಮಾಡಿ ತೀರ್ವನಿಸಲು ನಿರ್ಧರಿಸಿದ್ದರು.

2019ರ ಡಿ.23ರಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಜಿ.ಪಂ.ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಗುತ್ತಿಗೆಗೆ ನೀಡಲು ಸಮ್ಮತಿಸಿದ್ದರು. ನಂತರ ಕೆಲ ಸಂಘಟಕರು, ಸರ್ಕಾರವೇ ನಡೆಸಬೇಕೆಂದು ಪಟ್ಟು ಹಿಡಿದರು.

ಇತ್ತ ರೈತರು ಖಾಸಗಿಯವರಿಗೆ ಕೊಡಬೇಕೆಂದು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಕರೊನಾ ಕಾಟ ಆರಂಭವಾಯಿತು. ಮೇ 7ರಂದು ಬೆಂಗಳೂರಿನಲ್ಲಿ ಸಕ್ಕರೆ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಶಾಸಕರು, ಸಂಘಟನೆಗಳು ಖಾಸಗಿಗೆ ವಿರೋಧ ವ್ಯಕ್ತಪಡಿಸಿದರು.

ತರುವಾಯ ಜಿಲ್ಲಾ ಹಿತರಕ್ಷಣಾ ಸಮಿತಿ ಕೂಡ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸರ್ಕಾರ ಓ ಆಂಡ್ ಎಂ ಅಡಿ ಆರಂಭಿಸಲು ನಿರ್ಧರಿಸಿದೆ. ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದ್ದು, ಈ ಸಾಲಿನಲ್ಲಿಯೇ ಕಾರ್ಖಾನೆ ಆರಂಭವಾಗುವುದೇ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

ಖಜಾನೆ ಖಾಲಿ ಮಾಡಿದ ಕೋಜನ್

ಮೈಶುಗರ್ ಆದಾಯ ಹೆಚ್ಚಿಸಲೆಂದು 1998ರಲ್ಲಿ 57.35 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಿ, 30 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಹ ವಿದ್ಯುತ್ ಯೋಜನೆಗೆ ಅಡಿಗಲ್ಲು ಬಿತ್ತು.

2002ಕ್ಕೆ ಘಟಕ ಸಿದ್ಧವಾಗಿ 100 ಕೋಟಿ ರೂ.ಗಳನ್ನು ಹುಟ್ಟುವಾಗಲೇ ನುಂಗಿಬಿಟ್ಟಿತು. ಆದರೆ, ಈ ತನಕ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸಲಿಲ್ಲ.

ಕಾರ್ಖಾನೆ ವಿವಿಧ ತೆರಿಗೆ ಸೇರಿ 550 ಕೋಟಿ ರೂ.ಗೂ ಅಧಿಕ ಸಾಲದ ಸುಳಿಗೆ ಸಿಲುಕಿತ್ತು. ರಾಜ್ಯ ಸರ್ಕಾರದ 272 ಕೋಟಿ, ಹುಡ್ಕೋದ 45ಕೋಟಿ, ಬ್ಯಾಂಕ್​ಗಳ ಸಾಲ, ಬಡ್ಡಿ 65 ಕೋಟಿ, ಕೇಂದ್ರಕ್ಕೆ ಆದಾಯ ತೆರಿಗೆ 160 ಕೋಟಿ, ರಾಜ್ಯ ಸರ್ಕಾರಕ್ಕೆ 5-6 ಕೋಟಿ ರೂ. ಪಾವತಿಸಬೇಕಿತ್ತು. ಇದೆಲ್ಲವೂ ಸರ್ಕಾರದ ಖಜಾನೆಯಿಂದಲೇ ಪಾವತಿಯಾಗಿದೆ.

ಈಗಲೂ ಬೇಕು 110 ಕೋಟಿ ರೂ.

ಕಾರ್ಖಾನೆ ಆರಂಭಿಸಲು ಆರಂಭಿಕ ಬಂಡವಾಳ ಅಲ್ಲದೆ ಬಾಕಿ ನೀಡುವುದಕ್ಕೆ ಈಗಲೂ 110.09ಕೋಟಿ ರೂ. ಬೇಕಿದೆ. 2019ರ ಡಿಸೆಂಬರ್ ಅಂತ್ಯದ ವೇಳೆಗೆ ನೌಕರರ ವೇತನಕ್ಕೆ 12.30ಕೋಟಿ, ವಿದ್ಯುತ್ ಬಿಲ್ 25.04ಕೋಟಿ, 1997-98ನೇ ಸಾಲಿನ ಸಾರಾಯಿ ಮಾರಾಟದ ಟಿಸಿಎಸ್ ಬಾಕಿ 37ಕೋಟಿ, ಕರ್ನಾಟಕ ಆಹಾರ ನಿಗಮಕ್ಕೆ 19.44ಕೋಟಿ, ಸರಬರಾಜುದಾರರು, ಗುತ್ತಿಗೆದಾರರಿಗೆ 09.57ಕೋಟಿ, 2013-14ರಿಂದ 201-19 ಕಬ್ಬು ಖರೀದಿಗೆ ತೆರಿಗೆ 1.77ಕೋಟಿ, ಬೆಂಗಳೂರಿನ ಆಸ್ತಿ ತೆರಿಗೆಗಳು 1.60ಕೋಟಿ, ಕೆಎಸ್​ಐಐಡಿಸಿ ಸಾಲದ ಬಾಕಿ 3.37ಕೋಟಿ ರೂ. ಪಾವತಿಸಬೇಕಿದೆ.

ಕಾರ್ಖಾನೆ ನಡೆಸುವುದು ಸರ್ಕಾರದ ಕೆಲಸವಲ್ಲ. ಕಾರ್ಖಾನೆ ಒಂದು ಉದ್ಯಮ. ಈಗ ನೀಡಿರುವ ಹಣದಲ್ಲಿ 2 ಕಾರ್ಖಾನೆ ಮಾಡಬಹುದಿತ್ತು. ಸರ್ಕಾರವೇ ನಡೆಸಿದಲ್ಲಿ ಇನ್ನಷ್ಟು ಹಣ ಪೋಲಾಗುತ್ತದೆಯೇ ವಿನಃ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲ. ಸರ್ಕಾರ ಆಡಳಿತ ಮತ್ತು ಮೇಲ್ವಿಚಾರಣೆ ನೋಡಿಕೊಳ್ಳಲಿ. ಖಾಸಗಿಯವರಿಗೆ ಗುತ್ತಿಗೆಗೆ ನೀಡುವ ನಿರ್ಧಾರದಿಂದ ಹಿಂದೆ ಸರಿಯದಿರಲಿ. 1933ರಲ್ಲಿ ಉದ್ಯಮಿಗಳಿಲ್ಲದ ಕಾರಣದಿಂದ ಅಂದಿನ ಮೈಸೂರು ಸಂಸ್ಥಾನ ನಿರ್ವಹಣೆ ಮಾಡುತಿತ್ತು. ಈಗ ಅದು ಸೂಕ್ತವಲ್ಲ. | ಎಸ್.ಸಿ.ಮಧುಚಂದನ್ ಸಂಸ್ಥಾಪಕ ಅಧ್ಯಕ್ಷ ಆರ್ಗ್ಯಾನಿಕ್ ಮಂಡ್ಯ.

ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ

ಸರ್ಕಾರ ಈ ಮೊದಲು ಅಂದಾಜಿಸಿರುವ ಕಾರ್ಖಾನೆಯ ನಿವ್ವಳ ಆಸ್ತಿಯ ಮೌಲ್ಯ 280 ಕೋಟಿ ರೂ. ಬೆಂಗಳೂರಿನಲ್ಲಿರುವ ಮುಖ್ಯ ಕಚೇರಿಯೇ ಈಗ 500 ಕೋಟಿ ರೂ.ಗೂ ಅಧಿಕ ಬೆಲೆ ಬಾಳುತ್ತದೆ. ರೈತರು ಕಬ್ಬು ಬೆಳೆಯದಿದ್ದರೂ ಕಾರ್ಖಾನೆ ನಡೆಯಲಿ ಎಂಬ ಕಾರಣದಿಂದ ಒಡೆಯರ್ ಅವರು 3000 ಎಕರೆ ಕೃಷಿ ಜಮೀನು ಮೀಸಲಿಟ್ಟಿದ್ದರು. ಸಾತನೂರು ಬಳಿ 47 ಎಕರೆ, ಮರಕಾಡುದೊಡ್ಡಿ ಬಳಿ 44 ಎಕರೆ ಸೇರಿ ಇನ್ನೂ ಹಲವೆಡೆ ಬೆಲೆ ಬಾಳುವ ಆಸ್ತಿಗಳಿವೆ.

ರಾಜಕೀಯ ಪ್ರತಿಷ್ಠೆಗೆ ಬಲಿ

ಕಾರ್ಖಾನೆ ರಾಜಕೀಯ ಪ್ರತಿಷ್ಠೆಗೆ ಬಲಿಯಾಗುತ್ತಿದೆ. ಈತನಕ ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದವರು ಈಗ ಕಾರ್ಖಾನೆಯನ್ನು ಮುಂದಿಟ್ಟುಕೊಂಡಿದ್ದಾರೆ. ಕಠಿಣ ನಿಯಮಾವಳಿಗಳನ್ನು ರೂಪಿಸಿ ರೈತರು ಹಾಗೂ ಸರ್ಕಾರಕ್ಕೆ ಲಾಭ ತಂದುಕೊಡಬಲ್ಲ ಖಾಸಗಿ ಅವರಿಗೆ ಗುತ್ತಿಗೆ ನೀಡುವುದೇ ಸೂಕ್ತ ಎಂಬ ಜನಾಭಿಪ್ರಾಯ ಜಿಲ್ಲೆಯಲ್ಲಿದೆ. ಈ ಹಿಂದೆ ಕಾಂಗ್ರೆಸ್ ಕಾರ್ಖಾನೆ ಉಳಿಸಲು ನಿರ್ಧರಿಸಿ ಕೆಲ ಭ್ರಷ್ಟ ನೌಕರರನ್ನು ವ್ಯವಸ್ಥಾಪಕ ನಿರ್ದೇಶಕರು ಹೊರಹಾಕಿದಾಗ ಅಂದಿನ ಸಚಿವರು ಅಡ್ಡಿಯಾಗಿದ್ದರು. ಈಗ ಬಿಜೆಪಿ ಸರ್ಕಾರ ಕಾರ್ಖಾನೆಯನ್ನು ಆರಂಭಿಸಲು ಸಜ್ಜಾಗುತ್ತಿದ್ದಂತೆ ಕೆಲ ಸಂಘಟನೆಗಳು ಬೀದಿಗೆ ಇಳಿದವು. ಸಂಸದರು ಖಾಸಗಿ ಪರವಾಗಿ ನಿಂತಿದ್ದರಿಂದಲೋ ಏನೋ ಜಿಲ್ಲೆಯ ಶಾಸಕರು ಮತ್ತಷ್ಟು ವಿರೋಧಿಸಿದರು. ಷೇರುದಾರರಲ್ಲದವರು ಕಾರ್ಖಾನೆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ.

| ಮಾದರಹಳ್ಳಿ ರಾಜು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net