

ಮಂಡ್ಯ: ಕೆ.ಆರ್.ಎಸ್‌ನಿಂದ ತಿಬ್ಬನಹಳ್ಳಿಯವರೆಗಿನ 46 ಕಿ.ಮೀ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆ ಕಾಂಕ್ರೀಟ್ ಲೈನಿಂಗ್ ಮಾಡಲು ಟೆಂಡರ್ ಆಗಿದೆ. ಕಾಮಗಾರಿ ಕೈಗೊಳ್ಳಲು ಸೂಕ್ತ ಸಮಯ ಇದಾಗಿರುವುದರಿಂದ ಸರ್ಕಾರ ಕೂಡಲೇ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮೈಷುಗರ್ ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್.ಕೃಷ್ಣ ಆಗ್ರಹಿಸಿದರು.
ಇದುವರೆಗೆ ನಾಲೆಯಲ್ಲಿ ನೀರು ನಿಲ್ಲಿಸಲಾಗದೆ, ಕಾಂಕ್ರೀಟ್ ಲೈನಿಂಗ್ ಕಾಮಗಾರಿ ಆರಂಭಿಸಲು ಕಾಲಕೂಡಿ ಬಂದಿರಲಿಲ್ಲ. ಇದೀಗ ಮಳೆಯಿಲ್ಲದೆ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಕನಿಷ್ಟ ಮಟ್ಟದ ನೀರು ಇರುವುದರಿಂದ ನಾಲೆ ಮೂಲಕ ಕೃಷಿಗೆ ನೀರು ಕೊಡಲಾಗದು ಎಂದು ನೀರಾವರಿ ಸಲಹಾ ಸಮಿತಿ ತಿಳಿಸಿದೆ. ಆದ್ದರಿಂದ ಮೇ ತಿಂಗಳ ಮೊದಲ ವಾರದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ, ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಈ ಬಗ್ಗೆ ಗಮನ ನೀಡಿ ಕಾಮಗಾರಿ ಆರಂಭಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮೈಷುಗರ್ ಅಧ್ಯಕ್ಷರಾಗಿದ್ದ ನಾಗರಾಜಪ್ಪ ಅವರು ಕಾರ್ಖಾನೆಗೆ ಅಧ್ಯಕ್ಷರಾಗಿದ್ದಕ್ಕಿಂತ ಮುನ್ನ ಹಾಗೂ ನಂತರದಲ್ಲಿ ಅವರ ಸ್ಥಿರ ಮತ್ತು ಚರಾಸ್ತಿಗಳ ತನಿಖೆಯಾಗಬೇಕು. ನಾಗರಾಜಪ್ಪ ಕೋಟ್ಯಂತರ ರೂ ಹಗರಣ ನಡೆಸಿದ್ದಾರೆಂದು ಉಪಲೋಕಾಯುಕ್ತರು ವರದಿ ನೀಡಿದ್ದು, ಅದರಂತೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಿಲ್ಲಾಧಿಕಾರಿಗೆ ಕಾರ್ಖಾನೆ ಎಂಡಿ ರವಿಕುಮಾರ್ ಪತ್ರ ಬರೆದಿದ್ದಾರೆ. ನಾಗರಾಜಪ್ಪ ಮೈಸೂರು, ಚಾಮರಾಜನಗರ, ಬೆಂಗಳೂರು ಜಿಲ್ಲೆಯಲ್ಲೂ ಆಸ್ಥಿ ಮಾಡಿದ್ದಾರೆಂದು ತಿಳಿದುಬಂದಿದೆ. ಆದ್ದರಿಂದ ಆಯಾ ಜಿಲ್ಲಾಧಿಕಾರಿಯಿಂದ ವಿವರಣೆ ಪಡೆದರೆ ಸಾಕು, ಭ್ರಷ್ಟಾಚಾರ ಬೆಳಕಿಗೆ ಬರುತ್ತದೆಂದು ಸಲಹೆ ನೀಡಿದರು.
ಸಂಘದ ಪದಾಧಿಕಾರಿಗಳಾದ ಚನ್ನೇಗೌಡ, ಎಚ್.ಎಸ್.ದೇವರಾಜು, ಎಂ.ಜಿ.ನಾಗರಾಜು, ಬೋರೇಗೌಡ ಉಪಸ್ಥಿತರಿದ್ದರು.