

ಮಡಿಕೇರಿ: ನಗರದ ಜಿಲ್ಲಾಧಿಕಾರಿರವರ ಕಚೇರಿ ಸಭಾಂಗಣದಲ್ಲಿ ನನ್ನ ಮಣ್ಣು, ನನ್ನ ದೇಶ(ಮೇರಿ ಮಾಟಿ, ಮೇರಾ ದೇಶ್) ಅಭಿಯಾನದ ಪ್ರಯುಕ್ತ ಕೊಡಗು ಜಿಲ್ಲೆಯ ೫ ತಾಲೂಕುಗಳಿಂದ ಸಂಗ್ರಹಿಸಲಾದ ಮಾದರಿ ಮಣ್ಣಿನ ಬಿಂದಿಗೆಗಳನ್ನು ನವದೆಹಲಿಗೆ ತಲುಪಿಸುವ ಸಂಬಂಧ ಗುರುವಾರ ಜಿಲ್ಲಾಧಿಕಾರಿ ವೆಂಕಟ ರಾಜಾರವರ ಸಮ್ಮುಖದಲ್ಲಿ ರಾಯಭಾರಿಗಳಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಅಂಚೆ ಕಚೇರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಪಂಚಾಯಿತಿ ಮಡಿಕೇರಿ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ಇವರ ವತಿಯಿಂದ ಆಯೋಜಿಸಲಾಗಿದ್ದ ಮೇರ ದೇಶ್ ಮೇರ ಮಾಟಿ ಅಮೃತ್ ಕಳಸ ಯಾತ್ರೆಗೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ವೆಂಕಟರಾಜ ಮಾತನಾಡಿ, ಅಮೃತ ಕಳಸ ಯಾತ್ರೆಗೆ ಅಭಿನಂದನೆ ತಿಳಿಸಿದ ಅವರು, ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಭದ್ರತೆ ನೀಡಬೇಕು. ಹಾಗೆಯೇ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ರಾಯಭಾರಿಗಳಾಗಿ ದೆಹಲಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸುರಕ್ಷತೆ ಕಾಪಾಡಿಕೊಳ್ಳಲು ಸಲಹೆ ಮಾಡಿದರು.
ಅಮೃತ ಕಳಸ ಯಾತ್ರೆಯು ವಿಭಿನ್ನತೆಯಲ್ಲಿ ಏಕತೆಯನ್ನು ಸಾರುವ ಸಂದೇಶದೊಂದಿಗೆ ಜಿಲ್ಲೆಯ ಐದು ತಾಲೂಕಿನ ಮಣ್ಣನ್ನು ಸಂಗ್ರಹಿಸಲಾಗಿತ್ತು. ೫ ತಾಲೂಕಿನಿಂದ ವಿಶೇ? ರಾಯಭಾರಿಗಳಾದ ಯಕ್ಷಿತ್ ಹಾಕತ್ತೂರು, ಮೋಹಿತ್ ಮಾಚಯ್ಯ, ಜೋಶಿಕ್, ಕೌಶಿಕ್ ಹಾಕತ್ತೂರು, ಸುಜಿತ್ ಹೆಬ್ಬಿಟ್ಟಗೇರಿ, ರಾಯಭಾರಿಗಳಾದ ಅಜಿತ್, ಪ್ರೀತಮ್, ಸುನಿಲ್, ಕೃತಿಕ್ ರಾಯಭಾರಿಗಳನ್ನು ಆಯ್ಕೆ ಮಾಡಿ ಅವರೊಂದಿಗೆ ಕಚೇರಿಯ ಸದಸ್ಯರನ್ನು ಒಟ್ಟುಗೂಡಿಸಿ ದೆಹಲಿಗೆ ಕಳುಹಿಸಿಕೊಡಲು ಏರ್ಪಡಿಸಲಾಯಿತು.
ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಮಾತನಾಡಿ, ಅಮೃತ ಮಹೋತ್ಸವ ನಡೆದ ದಿನಗಳಿಂದ ಅತಿ ಹೆಚ್ಚು ಒತ್ತಡ ಇರುವುದರಿಂದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಹಾಗೂ ಮಣ್ಣನ್ನು ಸಂಗ್ರಹಿಸುವುದರಲ್ಲಿ ತಡವಾಗಿದ್ದರಿಂದ ತಡವಾಗಿ ಕಳಿಸುತ್ತಿದೆ. ಯಾವುದೇ ಅಡ್ಡಿ ಇಲ್ಲದೆ ಅಮೃತ ಕಳಸ ಯಾತ್ರೆಯು ಯಶಸ್ವಿಯಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಅಂಚೆ ಇಲಾಖೆಯ ಹಿರಿಯ ಅಧಿಕಾರಿ ರವಿ, ಜಿಲ್ಲಾ ಯುವ ಒಕ್ಕೂಟ ಸಲಹೆಗಾರರು ಕಂದಾ ದೇವಯ್ಯ ಹಾಗೂ ಎಂ.ಬಿ.ಜೋಯಪ್ಪ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ದಿಲೀಪ್ ಕುಮಾರ್, ನೆಹರು ಯುವ ಕೇಂದ್ರದ ಸಿಬ್ಬಂದಿಗಳಾದ ದೀಪ್ತಿ ರಂಜಿತ ಹಾಗೂ ಅಂಚೆ ಇಲಾಖೆಯ ಸಿಬ್ಬಂದಿಗಳು ಮತ್ತಿತರರು ಇದ್ದರು.