

ಮಂಡ್ಯ: ದೇಶದ 5,60 ಲಕ್ಷಕ್ಕೂ ಹೆಚ್ಚು ಗ್ರಾಮಗಳಲ್ಲಿ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನೆಹರೂ ಯುವ ಕೇಂದ್ರ ಸಂಘಟನೆಗಳ ದಕ್ಷಿಣ ರಾಜ್ಯಗಳ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ ಅಭಿಯಾನ’ದಡಿ ಮಂಡ್ಯ ತಾಲೂಕು ವಿವಿಧ ಗ್ರಾಮಗಳಲ್ಲಿ ಸಂಗ್ರಹಣೆ ಮಾಡಿರುವ ಮಣ್ಣನ್ನು ಮಿಶ್ರಣ ಮಾಡಿ ಅಮೃತ ಕಳಸದಲ್ಲಿ ಸ್ವೀಕರಿಸುವ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಮಣ್ಣು ಸಂಗ್ರಹಿಸಲು 238 ಬ್ಲಾಕ್ ಮಾಡಿಕೊಳ್ಳಲಾಗಿದೆ. ಈ ಪೈಕಿ ಮಂಡ್ಯ ತಾಲೂಕಿನಲ್ಲಿ ಮೊದಲ ಕಳಸ ಯಾತ್ರೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಗ್ರಾಮಗಳಲ್ಲಿ ಸಂಗ್ರಹಿಸುವ ಮಣ್ಣನ್ನು ಬ್ಲಾಕ್‌ಮಟ್ಟದಲ್ಲಿ ಮಿಶ್ರಣ ಮಾಡಿ ಅಮೃತ ಕಳಸದಲ್ಲಿ ತುಂಬಿ ದೆಹಲಿಗೆ ಕಳುಹಿಸಿಕೊಡಲಾಗುವುದು. ಗ್ರಾಮಗಳ ಜತೆಗೆ ನಗರ, ಪಟ್ಟಣದಲ್ಲೂ ಕಾರ್ಯಕ್ರಮ ನಡೆಯುತ್ತಿದೆ. ಒಟ್ಟಾರೆ 1600 ಯುವಕ/ಯುವತಿಯರು ಅಮೃತ ಕಳಸವನ್ನು ಅ.26ರಂದು ದೆಹಲಿಗೆ ತೆರಳಲಿದ್ದಾರೆ. ನ.1ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೃತ ಮಣ್ಣಿನಿಂದ ದೆಹಲಿಯಲ್ಲಿ ಅಮೃತ ವಟಿಕಾವನ್ನು ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಲಾಯದ ಕಾರ್ಯದರ್ಶಿ ಮೀತಾ ರಾಜೀವ್‌ಲೋಚನ್, ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಅಮೃತ ವಟಿಕಾ ಯೋಜನೆಯಡಿ ಸಸಿಗಳನ್ನು ನೆಡಲಾಗಿದೆ. ದೇಶದಲ್ಲಿ 9 ಲಕ್ಷಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಎರಡು ಕೋಟಿಗೂ ಹೆಚ್ಚು ಗಿಡಗಳನ್ನು ನೆಟ್ಟಿ ಪೋಷಿಸಲಾಗುತ್ತಿದೆ. ಯುವಶಕ್ತಿ ದೇಶದ ಭವಿಷ್ಯ. ಈ ಹಿನ್ನಲೆಯಲ್ಲಿ ಯುವಕರಿಗೆ ಹಲವು ಕಾರ್ಯಕ್ರಮವನ್ನು ಭಾರತ ಸರ್ಕಾರ ಆಯೋಜಿಸುತ್ತಿದೆ. ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಸಂವಿಧಾನದಲ್ಲಿ ನಮ್ಮ ಕರ್ತವ್ಯಗಳ ಬಗ್ಗೆ ಸಹ ಉಲ್ಲೇಖವಿದೆ. ಅದನ್ನು ಎಲ್ಲರೂ ಅನುಸರಿಸಬೇಕು. ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಡಿ ಇಂದು ಅನೇಕ ಗ್ರಾಮಗಳಿಂದ ಕಳಸದಲ್ಲಿ ಮಣ್ಣನ್ನು ಸಂಗ್ರಹಿಸಿ ಅದನ್ನು ದೆಹಲಿಯಲ್ಲಿ ವಾಟಿಕೆಯ ಉದ್ಯಾನವನಕ್ಕೆ ಸೇರಿಸಲಾಗುವುದು ಎಂದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್‌ಕುಮಾರ್, ಎನ್‌ಎಸ್‌ಎಸ್ ಸಮನ್ವಯಾಧಿಕಾರಿ ಡಾ.ಎಂ.ಕೆಂಪಮ್ಮ, ನೆಹರೂ ಯುವ ಕೇಂದ್ರದ ಅಧಿಕಾರಿ ರಾಜೇಶ್ ಕಾರಂತ್ ಇತರರಿದ್ದರು.