ಉದ್ಯಾನದ ಅಭಿವೃದ್ಧಿಗೆ 5 ಲಕ್ಷ ರೂ ಅನುದಾನ: ಶಾಸಕ ರವಿಕುಮಾರ್ ಗಣಿಗ ಭರವಸೆ

mandya news (5)
Published on

ಮಂಡ್ಯ: ನಗರದಲ್ಲಿರುವ ವೀರ ಸೈನಿಕರ ಉದ್ಯಾನದ ಅಭಿವೃದ್ಧಿಗೆ 5 ಲಕ್ಷ ರೂ ಅನುದಾನ ಒದಗಿಸುವುದಾಗಿ ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು.

ನಗರದ ಸ್ವರ್ಣಸಂದ್ರ ಬಡಾವಣೆಯ ವೀರ ಸೈನಿಕರ ಉದ್ಯಾನದಲ್ಲಿ ನಗರಸಭೆ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರೋಟರಿ ಸಹಯೋಗದಿಂದ ಶನಿವಾರ ಆಯೋಜಿಸಿದ್ದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ ಹೋರಾಡಿ ಮಡಿದ ಸೈನಿಕರಾದ ಶರತ್ ಹಾಗೂ ಸುಧೀರ್ ಅವರನ್ನು ಸ್ಮರಿಸುವ ಈ ಉದ್ಯಾನವನ್ನು ಹಂತ ಹಂತವಾಗಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದರು.

ನಾವು ಇಲ್ಲಿ ನಿಶ್ಚಿಂತೆಯಿಂದ ಜೀವಿಸಬೇಕಾದರೆ ಗಡಿಯಲ್ಲಿ ಸೈನಿಕರು ಎಚ್ಚರವಾಗಿರಬೇಕಾಗುತ್ತದೆ, ಅವರ ತ್ಯಾಗ ದೊಡ್ಡದ್ದು. ನಮ್ಮ ತಾತಾ ಅವರು ಕೂಡ ಸೇನೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಆದ್ದರಿಂದ ಆ ಸೈನಿಕರ ಕುಟುಂಬಗಳ ಕಷ್ಟಗಳು ನನ್ನ ಅರಿವಿದೆ ಎಂದು ಹೇಳಿದರು.

ಪೌರಾಯುಕ್ತ ಮಂಜುನಾಥ್ ಮಾತನಾಡಿ, ದೇಶದ ಪ್ರತಿ ಗ್ರಾಪಂ, ಪುರಸಭೆ, ನಗರಸಭೆಗಳಲ್ಲಿಯೂ ಸೈನಿಕರನ್ನು ಸ್ಮರಿಸುವಂತಹ ಇಂತಹ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ. ಎಲ್ಲ ಜಿಲ್ಲೆಗಳಿಂದ ಸಂಗ್ರಹಿಸಿದ ಮಣ್ಣಿನಿಂದ ದೆಹಲಿಯಲ್ಲಿ ಉದ್ಯಾನ ನಿರ್ಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದರು

ನಗರಸಭೆ ಸದಸ್ಯರಾದ ಸೌಭಾಗ್ಯ, ರಜನಿ, ಶ್ರೀಧರ್, ರಾಮಲಿಂಗಯ್ಯ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಶಿವನಂಜು, ಮಹಾಲಿಂಗು, ಪುಷ್ಪಾವತಿ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮಲ್ಲರಾಜು ಇತರರಿದ್ದರು.

ಇದೇ ವೇಳೆ ಸೈನಿಕರ ಸ್ಮಾರಕಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ನಂತರ ವೀರ ಸೈನಿಕರ ತಂದೆ, ತಾಯಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲ ತಾಲೂಕಿನಿಂದ ತಂದಿದ್ದ ಮಣ್ಣನ್ನು ಹಿಡಿದು ಪ್ರತಿಜ್ಞೆ ಸ್ವೀಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net