

ಹರಿಹರ: ಬಿಜೆಪಿ ನಗರ ಘಟಕದಿಂದ ಶನಿವಾರ ಮನೆಮನೆಗೆ ತೆರಳಿ ಮಣ್ಣನ್ನು ಸಂಗ್ರಹಿಸುವ ಮೂಲಕ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಪಿ. ಹರೀಶ್, ದೇಶಕ್ಕಾಗಿ ತಮ್ಮ ಪ್ರಾಣ ಬಲಿದಾನ ಮಾಡಿದ ಯೋಧರ ಸ್ಮರಣಾರ್ಥವಾಗಿ ನಿರ್ಮಿಸಲಿರುವ ಉದ್ಯಾವನಕ್ಕಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಅಭಿಯಾನ ಸರ್ವರಿಗೂ ಸಲ್ಲಬೇಕು. ನಮ್ಮ ಊರಿನ ಮಣ್ಣು ರಾಷ್ಟ್ರದ ರಾಜಧಾನಿಯಲ್ಲಿ ನಿರ್ಮಾಣಗೊಳ್ಳಲಿರುವ ಆಮೃತ ಉದ್ಯಾನವನ ಸ್ಥಳಕ್ಕೆ ಹೋಗುತ್ತಿರುವುದು ನಮ್ಮ ಊರಿನ ಹೆಮ್ಮೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ದಾವಣಗೆರೆ ಜಿಲ್ಲೆಯ ಮೂಲೆ ಮೂಲೆಯ ಮಣ್ಣನ್ನು ಕಾರ್ಯಕರ್ತರ ಮೂಲಕ ಸಂಗ್ರಹಿಸಿ ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಿಸುತ್ತಿರುವ ಹುತಾತ್ಮರ ಸ್ಮಾರಕ ಉದ್ಯಾವನಕ್ಕೆ ಕಳುಹಿಸಿ ಕೊಡಲಾಗುವುದು ಎಂದರು.
ಜಿಲ್ಲಾ ಸಂಚಾಲಕ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಇಟ್ಟಿಗೆ ಸಂಗ್ರಹಿಸಿದ ಮಾದರಿಯಲ್ಲಿಯೇ ಹುತಾತ್ಮರ ಸ್ಮಾರಕ ಉದ್ಯಾವನಕ್ಕಾಗಿ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ಆಟೋ ಹನುಮಂತಪ್ಪ, ನಗರಾಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ಮಂಜಾನಾಯ್ಕ, ತುಳಜಪ್ಪ ಭೂತೆ, ಬಾತಿ ಚಂದ್ರಶೇಖರ್, ರಾಘವೇಂದ್ರ ಉಪಾಧ್ಯಾಯ, ಐರಣಿ ನಾಗರಾಜ್, ರಾಜೇಶ್ ವರ್ಣೇಕರ್ ಇತರರಿದ್ದರು.