ನನ್ನ ಹೋರಾಟ ನಿಲ್ಲದು, ಮುಂದುವರಿಯಲಿದೆ...

Mahesh-Shetty-Thimarodi-1
Published on

ಜಾಮೀನು ಬಳಿಕ ಮಹೇಶ ತಿಮರೋಡಿ ಉಡುಪಿಯಲ್ಲಿ ಪ್ರತಿಕ್ರಿಯೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಎರಡು ದಿನದ ಜೈಲು ವಾಸದ ಬಳಿಕ ಇಂದು ಉಡುಪಿ ನ್ಯಾಯಾಲಯ ಜಾಮೀನು ಮಂಜೂರಿ ಮಾಡಿದೆ. ಮೊನ್ನೆಯೇ ಜಾಮೀನು ಸಿಗಬೇಕಿತ್ತು. ಈ ಪ್ರಕ್ರಿಯೆಗೆ ಸಹಕರಿಸಿದ ವಕೀಲರಿಗೆ ನಾನು ಅಭಿನಂದನೆ ಸಲ್ಲಿಸುವೆ. ಇಷ್ಟಕ್ಕೇ ನನ್ನ ಹೋರಾಟ ನಿಲ್ಲದು. ಅದು ಇನ್ನೂ ಮುಂದುವರಿಯಲಿದೆ ಎಂದು ಮಹೇಶ ಶೆಟ್ಟಿ ತಿಮರೋಡಿ ಪ್ರತಿಕ್ರಿಯೆ ನೀಡಿದರು.

ಉಡುಪಿ ನ್ಯಾಯಾಲಯ ಆಗಸ್ಟ್ 23ರಂದು ಜಾಮೀನು ನೀಡಿದ ಬಳಿಕ ಹಿರಿಯಡ್ಕದ ಕಾರಾಗ್ರಹದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ, ಅನಾಮಿಕ ಮಾಸ್ಕ್​ಮ್ಯಾನ್​ನ ಬಂಧನ ಆಗಿರುವುದು ನನಗೆ ಗೊತ್ತಿಲ್ಲ. ತನಿಖೆ ನಡೆಯಲಿ. ಒಳ್ಳೆಯದು ಎಂದರು.

ಯಾರೂ ಹೋರಾಟದ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ

ಸುಜಾತಾ ಭಟ್​ ಬಗ್ಗೆ ಏನೂ ಹೇಳುವುದಿಲ್ಲ. ಅವರು ನಮ್ಮ ಸೌಜನ್ಯಾಪರ ಹೋರಾಟದಲ್ಲಿ ಇಲ್ಲ. ಅನ್ಯಾಯ ಆಗಿದೆ ಎಂದು ಬಂದವರು ಅವರು. ನಾವು ಸುಜಾತಾನನ್ನು ನಂಬಿದವರಲ್ಲ. ನಾವು ಸೌಜನ್ಯಾಳ ಪರ ಹೋರಾಟ ನಂಬಿದವರು. ಆದರೆ, ನಮ್ಮನ್ನು ಯಾರೂ ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಅದು ಅಣ್ಣಪ್ಪ, ಮಂಜುನಾಥ ದೇವರಿಂದ ಮಾತ್ರ ಸಾಧ್ಯ ಎಂದು ಸ್ಯಾಟ್​ಲೈಟ್​ ಚಾನಲ್​ಗಳನ್ನು ಮತ್ತೆ ತರಾಟೆಗೆ ತೆಗೆದುಕೊಂಡರು. ಅದೆಲ್ಲ ಮಾಧ್ಯಮದವರಿಗೆ ಬಿಟ್ಟ ವಿಷಯ. ನಮಗ್ಯಾಕೆ? ಜಾಮೀನು ವಿಚಾರವಾಗಿ ಇವತ್ತು ಎಲ್ಲವೂ ಒಳ್ಳೆಯ ರೀತಿಯಲ್ಲಿ ಆಗಿದೆ. ಮುಂದಿನ ಹೋರಾಟ ಎಂದಿನಂತೆ ನಡೆಯಲಿದೆ ಎಂದರು.

ಉಡುಪಿ ನ್ಯಾಯಾಲಯ ಮಹೇಶ ಶೆಟ್ಟಿ ಅವರಿಗೆ ಜಾಮೀನು ಮಂಜೂರು ಮಾಡಿರುವುದು ಸಂತಸ ತಂದಿದೆ. ನ್ಯಾಯದ ಭಗೀರಥನಿಗೆ ನ್ಯಾಯ ಸಿಕ್ಕಿದೆ. ನಿರಂತರ ಅತ್ಯಾಚಾರ, ಕೊಲೆ ಪ್ರಕರಣಗಳ ವಿರುದ್ಧ 13 ವರ್ಷದಿಂದ ಅವರು ಹೋರಾಟ ಮಾಡಿದ್ದಾರೆ. ವಕೀಲ ಬಾಂಧವರಿಗೆ ತಿಮರೋಡಿ ಅಭಿಮಾನಿ ಬಳಗದ ಪರವಾಗಿ, ಸೌಜನ್ಯಾ ಹೋರಾಟಗಾರರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ. | ಗಿರೀಶ ಮಟ್ಟಣ್ಣನವರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net