ಮೈದುಂಬಿ ಹರಿಯುತ್ತಿವೆ ತುಂಗೆ, ವರದೆ

Tungabharda Lake
Published on

ಗುತ್ತಲ: ಚಿಕ್ಕಮಂಗಳೂರ, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಟ್ಟಿರುವ ಕಾರಣ ನದಿ ಮೈದುಂಬಿ ಹರಿಯುತ್ತಿದೆ. ಅಂತೆಯೇ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಸತತವಾಗಿ ಮಳೆಯಾಗುತ್ತಿದ್ದು, ವರದಾ ನದಿಯೂ ತುಂಬಿ ಹರಿಯುತ್ತಿದೆ.

ಗುತ್ತಲ ಹೋಬಳಿಯಲ್ಲಿನ ರೈತರಿಗೆ ತುಂಗಭದ್ರಾ ಹಾಗೂ ವರದಾ ನದಿಗಳು ಮೈದುಂಬಿ ಹರಿಯುತ್ತಿರುವುದು ವರದಾನವಾಗಿದೆ. ಭಾನುವಾರ ರಾತ್ರಿ 2.15 ಮೀಟರ್ ಇದ್ದ ತುಂಗಭದ್ರಾ ನದಿ ನೀರಿನ ಮಟ್ಟ ಸೋಮವಾರ ಸಂಜೆ 2.5 ಮೀಟರ್ ಏರಿಕೆ ಕಂಡಿದೆ. 573 ಕ್ಯೂಮೆಕ್ಸ್ ಒಳ ಹರಿವು ಸೋಮವಾರ ಸಂಜೆ ದಾಖಲಾಗಿದೆ.

ತುಂಗಭದ್ರಾ ನದಿ ತುಂಬಿರುವ ಹಿನ್ನೆಲೆಯಲ್ಲಿ ಹಾವೇರಿ ತಾಲೂಕಿನ ಕಂಚಾರಟ್ಟಿ, ಹರಳಹಳ್ಳಿ, ಹಾವನೂರು, ಶಾಕಾರ, ಹಾವಂಶಿ, ಹುರಳಿಹಾಳ, ಗಳಗನಾಥ, ಗುಯಿಲಗುಂದಿ, ಮೇವುಂಡಿ ಹಾಗೂ ತೆರೆದಹಳ್ಳಿ ಗ್ರಾಮಗಳಲ್ಲಿ ನದಿ ಪಾತ್ರದ ರೈತರ ಜಮೀನುಗಳಿಗೆ ನೀರು ದೊರೆಯುತ್ತಿದೆ.

ವರದಾ ನದಿ ಸಹ ತುಂಬಿ ಹರಿಯುತ್ತಿರುವುದರಿಂದ ನದಿಪಾತ್ರದ ಗ್ರಾಮಗಳಿಗೆ ಅನುಕೂಲವಾಗಿದೆ. ಉಭಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಕಬ್ಬು, ಮೆಣಸಿನಕಾಯಿ, ಮೆಕ್ಕೆಜೋಳ ಸೇರಿದಂತೆ ಅನೇಕ ತೋಟಗಾರಿಕೆ ಬೆಳೆಗಳಿಗೆ ನೀರು ದೊರೆಯುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net