

ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಕೇಂದ್ರ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ಮಾಸಾಚರಣೆ ಹಿನ್ನೆಲೆಯಲ್ಲಿ ಜೂ.10, 11 ರಂದು ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಮೈ ಗ್ರೀನ್’ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಕೇಂದ್ರದ ಅಧ್ಯಕ್ಷ ನಾಗರಾಜ್ ವಿ. ಬೈರಿ ಹೇಳಿದರು.
ಜೂ.10 ರಂದು ಬೆಳಗ್ಗೆ 10ಕ್ಕೆ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಶ್ರೀನಿವಾಸ ರೆಡ್ಡಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡುವರು. ವಸ್ತು ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, 20ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಪ್ರದರ್ಶನದಲ್ಲಿ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಪದಾರ್ಥಗಳು, ನವೀಕರಿಸಿದ ಉತ್ಪನ್ನಗಳು, ತಂತ್ರಜ್ಞಾನ, ಸಾವಯವ ಆಹಾರ ಪದಾರ್ಥಗಳು ಮತ್ತು ಮುಂತಾದ ಪರಿಸರ ಸ್ನೇಹಿ ಜೀವನಶೈಲಿ ಅನುಕರಣೀಯ ಉತ್ಪನ್ನಗಳು ಇರಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರದರ್ಶನದಲ್ಲಿ ನವೀಕರಿಸಿದ ಮರದ ಉತ್ಪನ್ನಗಳು, ಪರಿಸರಸ್ನೇಹಿ ಕಟ್ಟಡ ತಂತ್ರಜ್ಞಾನ ಮತ್ತು ಉತ್ಪನ್ನಗಳು, ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟ್‌ಗಳು, ಮೈಕೋಗ್ರಿಡ್ ಕುಡಿಯುವ ನೀರಿನ ಸಂಸ್ಕರಣೆಯ ವಿಧಾನಗಳು ಮತ್ತು ಉತ್ಪನ್ನಗಳು, ಕೊಳಚೆ ನೀರಿನ ಸಂಸ್ಕರಿಸಿದ ಮತ್ತು ಮರು ಉಪಯೋಗ, ನವೀಕರಿಸಬಹುದಾದ ಇಂಧನ ಮೂಲಗಳ ಮಾಹಿತಿ, ಕರಕಶುಲ ವಸ್ತುಗಳು, ವಿದ್ಯುತ್ ಚಾಲಿತ ವಾಹನ, ಸಸಿಗಳು, ಬೀಜಗಳು, ಸಾವಯವ ಆಹಾರ ಪದಾರ್ಥಗಳು, ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.