

ಬೆಟ್ಟದಪುರ: ವಿರೋಧಿಗಳು ಟೀಕೆ ಮಾಡುವ ಬದಲು ತಮ್ಮ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕಿತ್ತು. ಅದನ್ನು ಬಿಟ್ಟು ಇಲ್ಲಸಲ್ಲದನ್ನು ಮಾತನಾಡಬಾರದು ಎಂದು ಪಶುಸಂಗೋಪನಾ ಹಾಗೂ ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಹೇಳಿದರು.
ಬೆಟ್ಟದಪುರ ಸಮೀಪದ ಗಂಗನಕುಪ್ಪೆ ಗ್ರಾಮದಲ್ಲಿ ಶನಿವಾರ ಹಾರಂಗಿ ಬಲದಂಡೆ ನಾಲೆಯಡಿ ಅಡಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುವ ನಿಟ್ಟಿನಲ್ಲಿ ಹಂತಹಂತವಾಗಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ. ಕೆಲ ವಿರೋಧಿಗಳು ಅಭಿವೃದ್ಧಿ ಕೆಲಸ ಸಹಿಸಲಾಗದೆ ಮಾತನಾಡುತ್ತಿದ್ದಾರೆ ಎಂಬುದು ಜನರಲ್ಲಿ ಕೇಳಿಬರುತ್ತಿದೆ. ಅವರಿಗೆ ಸಿಕ್ಕಿದ ಅಧಿಕಾರ ಅವಧಿಯಲ್ಲಿ ಕೆಲಸ ಮಾಡಬಹುದೀತು ಅಲ್ಲವೆ? ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಪ್ರಮಾಣಿಕವಾಗಿ ಅನುದಾನ ನೀಡಿ ಕೆಲಸ ಮಾಡುತ್ತಿದ್ದೇನೆ. ಗ್ರಾಮಸ್ಥರ ನಿರೀಕ್ಷೆಗಿಂತಲೂ ಹೆಚ್ಚು ಅನುದಾನ ನೀಡುವ ಮೂಲಕ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿವಿಧೆಡೆ ಭೂಮಿಪೂಜೆ
ಸಮೀಪದ ಕುಳ್ಳಯ್ಯನಕೊಪ್ಪಲು, ರಾಜನಬಿಳಗೂಲಿ, ಕೆ.ಬಸವನಹಳ್ಳಿ, ಹೊನ್ನಾಪುರ, ಶ್ಯಾನುಭೋಗನಹಳ್ಳಿ, ಅಂಬಲಾರೆ ಹಾಗೂ ಹಾರನಹಳ್ಳಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು. ಗ್ರಾಮಕ್ಕೆ ಸಚಿವರು ಆಗಮಿಸಿದ ಹಿನ್ನೆಲೆ ಗ್ರಾಮಸ್ಥರು ಹಾಗೂ ಮುಖಂಡರು ಸನ್ಮಾನಿಸಿದರು. ಬಳಿಕ ಸಚಿವರು ಜನರ ಅಹವಾಲು ಸ್ವೀಕರಿಸಿದರು.
ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬೆಟ್ಟದಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಗ್ರಾಮ ಪಂಚಾಯಿತಿ ಸದಸ್ಯರಾದ ಚತುರಾ, ಶೀಲಾಮಣಿ, ಮುಖಂಡರಾದ ಭೀಮಣ್ಣ(ಶಿವಣ್ಣ), ಜ್ಯೋತಿ ಕುಮಾರ್, ಶೇಖರ್, ರಾಮೇಗೌಡ, ಟಿ.ರಮೇಶ್, ಜಿ.ಸಿ ಪುಟ್ಟರಾಜು, ರಾಮಚಂದ್ರ, ಕುಚಲೇಗೌಡ, ಮಹದೇವ್, ಬಿರ್ಲಾ ಹರೀಶ್, ಸುಮಿತ್, ತಾ.ಪಂ ಇಒ ಸುನಿಲ್ ಕುಮಾರ್, ಹಾರಂಗಿ ಎಇಇ ಗೋಕುಲ್, ಎಇ ಶಿವಕುಮಾರ್, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಸಿಡಿಪಿಒ ಮಮತಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಿಎಸ್‌ಐ ಸ್ವಾಮಿನಾಯಕ್, ಪಿಡಿಒ ಬಿ.ಪಿ.ಧನಂಜಯ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.