

ತರೀಕೆರೆ: ಹೊಸದಾಗಿ ಸರ್ಕಾರಿ ಕೆಲಸಕ್ಕೆ ಹೊಸದಾಗಿ ಸೇರಿರುವವರಿಗೆ ನೂತನ ಪಿಂಚಣಿ ವ್ಯವಸ್ಥೆ ಬದಲಿಗೆ ಪುನಃ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕೆನ್ನುವುದೇ ನನ್ನ ಮೊದಲ ಆದ್ಯತೆ. ಅದು ಜಾರಿಯಾಗುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಅವರು ಮಾತನಾಡಿ, ರಾಜ್ಯದಲ್ಲಿ 2.5 ಲಕ್ಷ ನೌಕರರು ಎನ್‌ಪಿಎಸ್ ಅಡಿಯಲ್ಲಿ ನೇಮಕವಾಗಿದ್ದಾರೆ. ಇವರ ಜತೆಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆ, ಅರೆ ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ನಿವೃತ್ತ ನೌಕರರಿಗೂ ಒಪಿಎಸ್ ವ್ಯವಸ್ಥೆ ಜಾರಿಯಾಗಬೇಕೆಂದು ಸದನದಲ್ಲಿ ಸರ್ಕಾರದ ವಿರುದ್ದ ಧ್ವನಿ ಎತ್ತಿ ಹೋರಾಟ ಮಾಡುತ್ತ ಬರಲಾಗಿದೆ. ಜನಪ್ರತಿನಿಧಿಗಳಿಗೆ ಹಳೇ ಪಿಂಚಣಿ ವ್ಯವಸ್ಥೆ ಇದೆ. ಆದರೆ ದಶಕಗಳ ಕಾಲ ಸೇವೆ ಸಲ್ಲಿಸುವ ಸರ್ಕಾರಿ ನೌಕರರಿಗೆ ಏಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ 30 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸುವ ನೌಕರರು ನಿವೃತ್ತಿ ಅಂಚಿನಲ್ಲಿ ಅನಿಶ್ಚಿತತೆ ಮತ್ತು ಅಭದ್ರತೆಯಲ್ಲಿ ಬಳಲುವಂತಾಗಿದೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಒಪಿಎಸ್ ಜಾರಿಗೆ ತರುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. 2006ರಿಂದ ಇತ್ತೀಚೆಗೆ ನೇಮಕಗೊಂಡ ಸರ್ಕಾರಿ ನೌಕರರಿಗೂ ಒಪಿಎಸ್ ನೀಡುವ ತರುವ ತನಕ ಮಿಶ್ರಮಿಸುವುದಿಲ್ಲ ಎಂದರು.
ಬೆವರು ಹರಿಸಿ ದುಡಿಯುವ ವರ್ಗಕ್ಕೆ ಎಂದಿಗೂ ಅನ್ಯಾಯವಾಗಬಾರದೆಂಬ ಕಾರಣಕ್ಕೆ ಕಾಲೇಜು ದಿನಗಳಿಂದಲೇ ಹೋರಾಟಕ್ಕೆ ಧುಮುಕಿದ್ದೇನೆ. ಈ ಮೂಲಕ ನೊಂದವರ ಪಾಲಿನ ದನಿಯಾಗಿ ನಿಂತಿದ್ದೇನೆ. ಶಾಸಕ, ಸಂಸದ, ರಾಜ್ಯಸಭಾ ಸದಸ್ಯ ಮತ್ತು ವಿಧಾನ ಪರಿಷತ್ ಸದಸ್ಯನಾಗಿ ಕೆಲಸ ಮಾಡಿದ ಅನುಭವ ನನಗಿದೆ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾಗಿದ್ದಾಗ ಕೆಲ ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿವೆ. ಆದರೆ ಅವರು ಶಿಕ್ಷಕರ ಕಣ್ಣೀರು ಒರೆಸುವ ಕೆಲಸ ಮಾಡಲಿಲ್ಲ. ತಮ್ಮ ಮನೆಯಲ್ಲಿ ಸಾಕು ನಾಯಿ ಸತ್ತಾಗ ಕಣ್ಣೀರು ಸುರಿಸಿ, ಸಂಸ್ಕಾರ ನಡೆಸಿ ಅದಕ್ಕೊಂದು ಗದ್ದುಗೆಯನ್ನು ಕಟ್ಟಿಸಿದರು. ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ ಕುಟುಂಬಗಳಿಗೆ ಸೌಜನ್ಯಕ್ಕೂ ಸಾಂತ್ವನ ಹೇಳಲಿಲ್ಲ ಎಂದು ಕಿಡಿ ಕಾರಿದರು.
ತಾಲೂಕು ಎನ್‌ಪಿಎಸ್ ಅಧ್ಯಕ್ಷ ಡಾ. ಟಿ.ಎಂ.ದೇವರಾಜ್ ಮಾತನಾಡಿ, ಸರ್ಕಾರ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿರುವುದರಿಂದ ನೌಕರರು ನಿವೃತ್ತಿ ನಂತರ ಬಹು ಕಷ್ಟದ ಜೀವನ ಸಾಗಿಸುವಂತಾಗಲಿದೆ. ಅನಾರೋಗ್ಯ ಪೀಡಿತರಾದಲ್ಲಿ ಔಷಧಗಳನ್ನು ಕೊಂಡು ಕೊಳ್ಳುವುದೂ ಕಷ್ಟವಾಗಲಿದೆ. ಸರ್ಕಾರ ಹೊಸ ಪಿಂಚಣಿ ಯೋಜನೆ ಕೈಬಿಟ್ಟು ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ಉಸ್ತುವಾರಿ ರಮೇಶ್ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮತ್ತಿತರರಿದ್ದರು.