ನನ್ನ ತಂದೆ ಆಲೋಚನೆಗಳೇ ರಾಜಕೀಯ ಏಳಿಗೆಗೆ ಸಹಕಾರಿ

16KMD-1
ಅಣ್ಣೂರು ಗ್ರಾಮದಲ್ಲಿ ಶ್ರೀ ಮಾರಮ್ಮ ಸೇವಾ ಸಮಿತಿ ವತಿಯಿಂದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರನ್ನು ಭಾನುವಾರ ಸನ್ಮಾನಿಸಲಾಯಿತು. ಎ.ಟಿ.ಬಲ್ಲೇಗೌಡ, ಎ.ಸಿ.ಸತೀಶ್, ನವೀನ್, ಸಿದ್ದರಾಮೇಗೌಡ, ಅಣ್ಣೂರು ಸತೀಶ್, ಆರ್.ಸಿದ್ದಪ್ಪ ಇತರರಿದ್ದರು.
Published on

ಕೆ.ಎಂ.ದೊಡ್ಡಿ: ನನ್ನ ತಂದೆ ಜಿ.ಮಾದೇಗೌಡರ ರಾಜಕೀಯ ಪಟ್ಟುಗಳನ್ನು ನಾನು ಕಲಿಯುತ್ತಿದ್ದೇನೆ. ಅವರ ಯೋಚನೆ-ಆಲೋಚನೆಗಳೇ ನನ್ನ ರಾಜಕೀಯ ಏಳಿಗೆಗೆ ಸಹಕಾರಿಯಾಗಿವೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ಭಾನುವಾರ ಸಮೀಪದ ಅಣ್ಣೂರು ಗ್ರಾಮದಲ್ಲಿ ಶ್ರೀ ಮಾರಮ್ಮ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ತಂದೆಯ ರಾಜಕೀಯ ನೆರಳಿನಲ್ಲಿ ನಾನು ಸಾಗುತ್ತಿದ್ದು, ಸಾಮಾಜಿಕ ಚಿಂತನೆಯಲ್ಲಿ ರಾಜಕೀಯ ಮಾಡುತ್ತಿದ್ದೇನೆ ಎಂದರು.

ಗೌಡರ ಜನಸೇವೆಯೇ ನನಗೆ ಸ್ಫೂರ್ತಿದಾಯಕವಾಗಿದ್ದು ಅವರ ತೋರಿಸಿರುವ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಅವರ ಜನಪರ ಕಾಳಜಿ, ಹೋರಾಟವನ್ನು ರಕ್ತಗತವಾಗಿ ಮೈಗೂಡಿಸಿಕೊಂಡಿದ್ದೇನೆ. ನಾನು ಜನರ ಸೇವೆ ಮಾಡಲು ಬಂದಿದ್ದು ರಾಜಕಾರಣ ಮಾಡುವ ಸಂದರ್ಭದಲ್ಲಿ ರಾಜಕೀಯ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನನಗೆ ನಿಮ್ಮ ಬೆಂಬಲ ಅಗತ್ಯವಿದ್ದು ಆ ವೇಳೆ ನನಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಗ್ರಾಮ ದೇವತೆ ಮಾರಮ್ಮ ದೇವಸ್ಥಾನದ ಅಭಿವೃದ್ಧಿಗೆ 5 ಲಕ್ಷ ರೂ. ಅನುದಾನ ನೀಡಿದ್ದೆ. ದೇವಸ್ಥಾನ ತುಂಬ ಅಚ್ಚುಕಟ್ಟಾಗಿ ಬರುತ್ತಿರುವುದರಿಂದ ಮತ್ತೆ 5 ಲಕ್ಷ ರೂ. ಅನುದಾನ ನೀಡುತ್ತೇನೆಂದು ಭರವಸೆ ನೀಡಿ, ಮುಂದಿನ ದಿನಗಳಲ್ಲಿ ಮಾರಮ್ಮ ನಿಮಗೆ ಒಳಿತು ಮಾಡಲಿ ಎಂದು ಆಶಿಸಿದರು.

ಜಿಪಂ ಮಾಜಿ ಸದಸ್ಯ ಎ.ಟಿ.ಬಲ್ಲೇಗೌಡ ಮಾತನಾಡಿ, ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರು ಜಿಲ್ಲಾ ಪಂಚಾಯಿತಿಗೆ ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಮಾಡಿ ಬಿ ಫಾರಂ ನೀಡಿದ್ದರು. ಅವರ ಆಶೀರ್ವಾದದಿಂದ ನಾನು ಆಯ್ಕೆಗೊಂಡಿದ್ದೆ. ಅದರಂತೆ ನಾನು ಸಮಾಜಮುಖಿ ಕೆಲಸಗಳನ್ನು ಕ್ಷೇತ್ರದಲ್ಲಿ ಮಾಡಿ ತೋರಿಸಿದ್ದೇನೆ ಎಂದರು.

ಭಾರತೀನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚು ಅನುದಾನ ನೀಡಿದ್ದೇನೆ. ಸಾರ್ವಜನಿಕರ ಸುಲಭ ಶೌಚಗೃಹ, ಸ್ಮಶಾನ ಅಭಿವೃದ್ಧಿ, ಚಿರಶಾಂತಿ ವನ, ಅಣ್ಣೂರು ಮತ್ತು ಭಾರತೀನಗರದಲ್ಲಿ ವಿದ್ಯಾರ್ಥಿ ನಿಲಯವನ್ನು ಮಂಜೂರು ಮಾಡಿಸಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದು ನನಗೆ ತೃಪ್ತಿ ತಂದಿದೆ ಎಂದರು.

ಈ ವೇಳೆ ಎಂಎಲ್ಸಿ ಮಧು ಜಿ.ಮಾದೇಗೌಡರಿಗೆ ನೆನಪಿನ ಕಾಣಿಕೆ ನೀಡಿ ಮೈಸೂರು ಪೇಟ ತೋಡಿಸಿ ಅಭಿನಂದಿಸಿದರು. ಮನ್‌ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್, ಮುಖಂಡರಾದ ಅಣ್ಣೂರು ನವೀನ್, ಎಲೆಕ್ಟ್ರಿಕ್ ಸಿದ್ದರಾಮೇಗೌಡ, ಶ್ರೀ ಮಾರಮ್ಮ ಸೇವಾ ಸಮಿತಿಯ ಅಧ್ಯಕ್ಷ ಸಿದ್ದರಾಮೇಗೌಡ, ಪರಿಸರ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಅಣ್ಣೂರು ಸತೀಶ್, ಸೊಸೈಟಿ ಮಾಜಿ ಅಧ್ಯಕ್ಷ ಆರ್.ಸಿದ್ದಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಹೋಂಡಾ ಸಿದ್ದೇಗೌಡ, ರಾಜಣ್ಣ, ದೇವರಾಜು ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net