ಬಿಟ್ಟೆನೆಂದರೂ ಬಿಡದೀ ಪದ ‘ಮುಜರಾಯಿ’!

mujarai new
Published on

ವೇಣುವಿನೋದ್ ಕೆ.ಎಸ್. ಮಂಗಳೂರು

ಮುಜರಾಯಿ ಎನ್ನುವ ಪದವನ್ನು ಸರ್ಕಾರದ ಪ್ರಕಾರ ಅಧಿಕೃತವಾಗಿ ವರ್ಷದ ಹಿಂದೆಯೇ ಕೈಬಿಡಲಾಗಿದೆ. ಆದರೆ ಕೋಟ ಶ್ರೀನಿವಾಸ ಪೂಜಾರಿ ಈಗಲೂ ಮುಜರಾಯಿ ಸಚಿವ!

ಅಷ್ಟೇ ಅಲ್ಲ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವೆಬ್‌ಸೈಟಿನ ಹಲವು ದಾಖಲೆಗಳು, ಸುತ್ತೋಲೆಗಳಲ್ಲೂ ಮುಜರಾಯಿ ಪದ ಬಳಕೆಯೇ ಮುಂದುವರಿದಿದೆ.

ಮುಜರಾಯಿ ಎನ್ನುವುದು ಪರ್ಷಿಯನ್ ಪದ. ಅದನ್ನು ಕೈ ಬಿಡಬೇಕು ಎನ್ನುವ ಮಂಗಳೂರಿನವರೊಬ್ಬರ ಪತ್ರಕ್ಕೆ ಸರ್ಕಾರ ಮಾಹಿತಿ ಹಕ್ಕಿನ ಮೂಲಕ ಒದಗಿಸಿದ ಮಾಹಿತಿ ಪ್ರಕಾರ 22.05.2019ರಲ್ಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಮುಜರಾಯಿ ಎಂಬ ಪದದ ಬದಲು ಹಿಂದು ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಎನ್ನುವ ಪದವನ್ನು ಬಳಕೆ ಮಾಡಬೇಕು ಎಂದು ತಿಳಿಸಲಾಗಿದೆ.

ಸಚಿವರ ಖಾತೆ: ಅಧಿಕೃತವಾಗಿ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಎಂಬ ಹೆಸರು ವೆಬ್‌ಸೈಟಿನಲ್ಲೇನೋ ಅಪ್‌ಡೇಟ್ ಆಗಿದೆ. ಆದರೆ ಸಚಿವರ ಖಾತೆಯ ಹೆಸರು ಮುಜರಾಯಿ ಎಂದು ಇನ್ನೂ ಮುಂದುವರಿಯುತ್ತಿದೆ.

ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಮುಜರಾಯಿ ಎನ್ನುವ ಹೆಸರು ಅಧಿಕೃತವಾಗಿ 1997ರಲ್ಲಿ ಕಾಯ್ದೆ ಬಂದಾಗಲೇ ಇರಲಿಲ್ಲ. ಆದರೆ ಹಿಂದಿನಿಂದಲೂ ಸರ್ಕಾರದ ಭಾಷೆಯಲ್ಲಿ, ಕಡತಗಳಲ್ಲಿ ಮುಜರಾಯಿ ಎಂಬ ಪದವೇ ಚಾಲ್ತಿಯಲ್ಲಿದ್ದುದು ಮುಂದುವರಿದಿದೆ. ಈಗಲೂ ಸುತ್ತೋಲೆಗಳಲ್ಲಿ ಆಗಾಗ ಅದೇ ಪದ ಪ್ರಕಟಗೊಳ್ಳುತ್ತಿದೆ.

ಟಿಪ್ಪು ಸುಲ್ತಾನ್ ಲಿಂಕ್: ಮುಜರಾಯಿ ಎನ್ನುವ ಪದ ಬರುವುದಕ್ಕೆ ಕಾರಣ ಪರ್ಷಿಯನ್ ಪದ ಮುಜ್ರಾ. ಮುಜ್ರಾ ಎಂದರೆ ಭತ್ಯೆ ಅಥವಾ ಕಳೆಯುವುದು ಎಂಬ ಅರ್ಥವಿದೆ. ಈ ಪದವೇ ಕ್ರಮೇಣ ಮುಜರಾಯಿ ಆಗಿ ಬದಲಾವಣೆಗೊಂಡಿತು. ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ನಿರ್ವಹಣೆಗೆ ಅನುದಾನ ಎನ್ನುವುದಕ್ಕೆ ಅರ್ಥ ಬರುವಂತೆ ಮುಜರಾಯಿ ಇಲಾಖೆ ಎಂಬ ಹೆಸರು ಬಂದಿರಬಹುದು. ಟಿಪ್ಪು ಸುಲ್ತಾನ್‌ಗೆ ಈ ರೀತಿ ಪರ್ಷಿಯನ್ ಹೆಸರುಗಳನ್ನು ಇರಿಸುವುದರಲ್ಲಿ ಆಸ್ತೆ ಇದ್ದು, ಆತನ ಕಾಲದಲ್ಲೇ ಈ ಹೆಸರು ಬಂದಿರಬಹುದು ಎಂದು ದಾಖಲೆಗಳು ತಿಳಿಸುತ್ತವೆ.

ಪದಬೇಡ, ಪಾವಿತ್ರೃ ಕಾಪಾಡಿ: ಹಿಂದೆ ಇಲಾಖೆಯಡಿ ಎಲ್ಲ ಧರ್ಮೀಯರ ಧಾರ್ಮಿಕ ಮಂದಿರಗಳೂ ಬರುತ್ತಿದ್ದವು, ಆದರೆ ಈಗ ಹಿಂದು ಧಾರ್ಮಿಕ ಸಂಸ್ಥೆಗಳಿಗೆ ಪ್ರತ್ಯೇಕ ಇಲಾಖೆ ಇರುವುದರಿಂದ ಮುಜರಾಯಿ ಎನ್ನುವ ಪದ ಸರಿಯಾಗುವುದಿಲ್ಲ, ಅದನ್ನು ರದ್ದುಗೊಳಿಸಬೇಕು ಎಂದು ಮಂಗಳೂರಿನ ಸಾಮಾಜಿಕ ಚಳವಳಿಗಾರ ಕಟೀಲು ದಿನೇಶ್ ಪೈ ಎಂಬವರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪತ್ರ ಬರೆದಿದ್ದರು.

ಅನ್ಯಮತೀಯರು ಹಿಂದು ದೇವಸ್ಥಾನಗಳಿಗೆ ತೆರಳುವುದಕ್ಕೆ ನಿಯಂತ್ರಣ ಹೇರಬೇಕು, ಅನೇಕರು ಪ್ರಚಾರಕ್ಕಾಗಿ ದೇವಸ್ಥಾನಗಳ ಒಳಗೆ ಪ್ರವೇಶಿಸುತ್ತಾರೆ, ತೀರ್ಥ ಪ್ರಸಾದ ಸೇವಿಸದೆ ಅವಮಾನ ಮಾಡುತ್ತಾರೆ, ಇಂಥದ್ದು ಸರಿಯಲ್ಲ, ಅವರಿಗೆ ದೇವಸ್ಥಾನದಲ್ಲಿ ನಡವಳಿಕೆ ಗೊತ್ತಾಗದೆ ಇರುವುದರಿಂದ ಸಾನಿಧ್ಯಕ್ಕೆ ಅಪಚಾರ ಮಾಡುತ್ತದೆ ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net