ಮೈದುಂಬಿದ ಮುತ್ಯಾಲಮಡು ಜಲಪಾತ, ಪ್ರವಾಸಿಗರ ಆಕರ್ಷಣೀಯ ತಾಣ, ಸೂಕ್ತ ರಕ್ಷಣೆ ಕಲ್ಪಿಸುವಂತೆ ಮನವಿ

07ank news and photos 02(3)
Published on

ನವೀನ್ ಚಂದ್ರ ಶೆಟ್ಟಿ ಆನೇಕಲ್
ನಿರಂತರ ಮಳೆಯಿಂದಾಗಿ ತಾಲೂಕಿನ ಮುತ್ಯಾಲಮಡು ಜಲಪಾತ ಮೈತುಂಬಿ ಧುಮ್ಮಿಕುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹಾಲಿನ ನೊರೆಯಂತೆ ಬೀಳುವ ನೀರಿನಲ್ಲಿ ಆಟವಾಡಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಜಲಪಾತದ 500 ಮೀಟರ್ ದೂರದಲ್ಲಿರುವ ಶಂಕು ಚಕ್ರ ಜಲಪಾತವೂ ಆಕರ್ಷಕವಾಗಿದೆ. ಅಲ್ಲಿಗೂ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಪರಿಸರ ಹಸಿರಾಗಿರುವುದರಿಂದ ಕುಟುಂಬ ಸಮೇತರಾಗಿ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದೆ.


ಬೆಂಗಳೂರಿಗೆ ಸಮೀಪದಲ್ಲಿರುವ ಜಲಪಾತಗಳಲ್ಲಿ ಮುತ್ಯಾಲಮಡು ಒಂದಾಗಿದ್ದು, 10 ದಿನಗಳಿಂದ ಪ್ರವಾಸಿಗರಿಗೆ ಮುದ ನೀಡುತ್ತಿದೆ. 300 ಅಡಿಗೂ ಎತ್ತರದಿಂದ ಧುಮ್ಮಿಕ್ಕುತ್ತಿರುವ ನೀರಿನ ಝರಿ ಜನರನ್ನು ಕೈಬೀಸಿ ಕರೆಯುತ್ತಿದೆ. ಮುಖ್ಯ ಜಲಪಾತದಲ್ಲಿ ನೀರಿನ ಸೆಲೆ ಹೆಚ್ಚಾಗಿದ್ದು, ಸುತ್ತಲಿನ ಪ್ರದೇಶದಲ್ಲಿ ಕಿರು ಜಲಪಾತಗಳು ಸೃಷ್ಟಿಯಾಗಿವೆ. ಬಂಡೆಗಳ ನಡುವೆ ಹರಿಯುವ ನೀರಿನಲ್ಲಿ ವಿಹರಿಸುವುದು ಹೊಸ ಅನುಭವ ಕಟ್ಟಿಕೊಡುತ್ತದೆ.


ಮರುಕಳಿಸಿದ ವೈಭವ: ಹಲವು ವರ್ಷಗಳಿಂದ ಮಳೆ ಇಲ್ಲದೆ ಕಣ್ಮರೆಯಾಗಿದ್ದ ಜಲಪಾತ ಈ ಬಾರಿ ವರುಣರಾಯನ ಕೃಪೆಯಿಂದ ವೈಭವವನ್ನು ಮರಳಿ ಪಡೆದಿದೆ. ಬೆಂಗಳೂರಿನಿಂದ 40 ಕಿಮೀ ದೂರದಲ್ಲಿರುವ ಜಲಪಾತಕ್ಕೆ ಸುಸಜ್ಜಿತವಾದ ರಸ್ತೆ ಸೌಕರ್ಯವಿದ್ದು, ಸ್ವಂತ ವಾಹನಗಳಲ್ಲಿ ಬರಬಹುದು. ಮಳೆ ಹಾಗೂ ಮೋಡದ ವಾತಾವರಣ ಇರುವುದರಿಂದ ಮುತ್ಯಾಲಮಡು ವೀಕ್ಷಣೆಗೆ ಈಗ ಹೇಳಿ ಮಾಡಿಸಿದ ಸಮಯವಾಗಿದೆ.

ಭದ್ರತೆ ಹೆಚ್ಚಿಸಲಿ: ಮುತ್ಯಾಲಮಡು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿ ಭದ್ರತಾ ವ್ಯವಸ್ಥೆ ಇಲ್ಲ. ಪ್ರವಾಸೋದ್ಯಮ ಇಲಾಖೆ ಇತ್ತ ಗಮನಹರಿಸಿ ಮೂಲಸೌಕರ್ಯ ಕಲ್ಪಿಸುವ ಜತೆಗೆ ಭದ್ರತೆ ಒದಗಿಸಿದರೆ ಪ್ರವಾಸಿಗರು ನಿಶ್ಚಿಂತೆಯಿಂದ ಪ್ರಕೃತಿಯ ಸೊಬಗು ಸವಿಯಲು ಸೂಕ್ತ ರಕ್ಷಣೆ ದೊರೆಯುವಂತಾಗುತ್ತದೆ.

ಯುವಕರ ಪುಂಡಾಟ: ಮುತ್ಯಾಲಮಡು ಸಮೀಪದ ಶಂಕು ಚಕ್ರ ಜಲಪಾತದ ಬಂಡೆಗಳ ಮೇಲೇರಿ ಯುವಕರು ೆಟೋ ತೆಗೆದುಕೊಳ್ಳಲು ಮುಂದಾಗುತ್ತಿದ್ದು, ಸ್ವಲ್ಪ ಯಾಮಾರಿದರೂ ಪ್ರಪಾತಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಪೊಲೀಸರು ವಿಶೇಷವಾಗಿ ವಾರಾಂತ್ಯದ ದಿನಗಳಲ್ಲಿ ಇತ್ತ ಬಂದೋಬಸ್ತ್ ಕಲ್ಪಿಸಬೇಕಿದೆ.

ಮಳೆಯಿಂದಾಗಿ ಮುತ್ಯಾಲಮಡು ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿ ಮೇಲಿನಿಂದ ಧುಮ್ಮಿಕ್ಕುತ್ತಿರುವುದು ರಮಣೀಯವಾಗಿದೆ. ಪ್ರಕೃತಿಯ ಮಡಿಲಿನಲ್ಲಿರುವ ಇಂತಹ ಪರಿಸರವನ್ನು ಕಣ್ತುಂಬಿಕೊಳ್ಳುವುದು ಮನಸಿಗೆ ಮುದ ನೀಡುತ್ತದೆ.
ಸಂಗೀತ, ಪ್ರವಾಸಿಗರು, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net