ಮುತ್ತೇಗೆರೆ ಮಾರಮ್ಮ ದೇವಿ ಜಾತ್ರೆ ಸಂಪನ್ನ: ಹೊರರಾಜ್ಯದಿಂದಲೂ ಆಗಮಿಸಿದ ಭಕ್ತರ ದಂಡು

Muttegere Mayamma Devi Jatre mandya
Published on

ಮಂಡ್ಯ: ತಾಲೂಕಿನ ಮುತ್ತೇಗೆರೆ ಗ್ರಾಮದಲ್ಲಿ ನಾಲ್ಕು ದಿನದ ನಡೆಯುತ್ತಿದ್ದ ಮಾಯಮ್ಮ ದೇವಿ ಜಾತ್ರಾ ಮಹೋತ್ಸವ ಗುರುವಾರ ಸಂಪನ್ನಗೊಂಡಿತು.
ಮಾ.11ರಂದು ಬೆಳಗ್ಗೆ ಮಾಯಮ್ಮ ದೇವಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಹೋಮದೊಂದಿಗೆ ಜಾತ್ರೆಗೆ ಚಾಲನೆ ನೀಡಲಾಯಿತು. ಎರಡನೇ ದಿನ ಅಪಾರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸಂಭ್ರಮ, ಸಡಗರದಿಂದ ನೆರವೇರಿತು. ಭಕ್ತರು ಬಾಳೆಹಣ್ಣು, ಜವನ ಅರ್ಪಿಸಿ ಹರಕೆ ತೀರಿಸಿದರು. ಕೆಂಚನಹಳ್ಳ, ಹುನುಗನಹಳ್ಳಿ, ಹಟ್ನ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಪಾಲ್ಗೊಂಡರು.
ಮೂರನೇ ದಿನ ಮುಂಜಾನೆ ಮಾಯಮ್ಮ ದೇವಿ, ಕರಿಯಪ್ಪ, ಹುಚ್ಚಪ್ಪ, ವರಕೋಡಪ್ಪ, ಮೊಳಗನಪ್ಪ, ಹರಳಕೆರೆ ಮಂಟಿಯಪ್ಪ, ತಗ್ಗಹಳ್ಳಿ ಗಂಗಪ್ಪ ದೇವರ ಕೂಟಗಳು ಗ್ರಾಮದೇವತೆ ಪಟ್ಟಲದಮ್ಮ ದೇವಸ್ಥಾನದ ಬಳಿ ಹೂವು ಹೊಂಬಾಳೆ ಪೂಜೆ ನೆರವೇರಿಸಲಾಯಿತು. ತಮಟೆ ಮಂಗಳವಾದ್ಯದೊಂದಿಗೆ ಓಕುಳಿ ಆಡಲಾಯಿತು. ಗುರುವಾರ ಬೆಳಗ್ಗೆ ಮಾಯಮ್ಮ ದೇವಿಗೆ ಮಂಗಳಾರತಿ ನೆರವೇರಿಸಲಾಯಿತು. ಜತೆಗೆ ಹೊರಗಿನ ಊರುಗಳಿಂದ ಆಗಮಿಸಿದ್ದ ಏಳು ಕೂಟದ ದೇವರಿಗೆ ಗ್ರಾಮಸ್ಥರಿಂದ ಪೂಜೆ ಸಲ್ಲಿಸಿ ಆರತಿ ಮಾಡಿ ಗ್ರಾಮದ ಹೊರಭಾಗದಲ್ಲಿರುವ ಅರಳಿ ಮರದವರೆಗೆ ಕಳುಹಿಸಿ ಕೊಡಲಾಯಿತು. ಜಾತ್ರೆಗೆ ತಮಿಳುನಾಡಿನ ಕೊಯಮತ್ತೂರು, ಹಾಸನ, ಶಿವಮೊಗ್ಗ, ಭದ್ರಾವತಿ, ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಗ್ರಾಮದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಮಾತ್ರವಲ್ಲದೆ ಬಾಯಿ ಬೀಗ, ಮುಡಿಸೇವೆ, ತಂಬಿಟ್ಟಿನ ಆರತಿ ಸೇವೆ ಸೇರಿದಂತೆ ವಿವಿಧ ಬಗೆಯ ಪೂಜೆ ಸಲ್ಲಿಸಿದರು. ಗ್ರಾಮದ ಮಾಯಮ್ಮ, ಈಶ್ವರ, ಪಟ್ಟಲದಮ್ಮ, ಚಿಕ್ಕಮ್ಮ, ಲಕ್ಷ್ಮೀದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಕಟ್ಟಡಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net