

ಬೇತಮಂಗಲ: ಕೋಲಾರ ಜಿಲ್ಲೆಯೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಅಪಾರ ನಂಟಿದೆ. ಜಿಲ್ಲೆಯ ಹಿರಿಯ ರಾಜಕಾರಣಿ ಎಂ.ವಿ.ಕೃಷ್ಣಪ್ಪ ಆಪ್ತರಾಗಿದ್ದು, ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ 1,000 ಕೋಟಿ ರೂ. ಅನುದಾನ ನೀಡುವ ಮೂಲಕ ಜನಮನದಲ್ಲಿ ಶಾಶ್ವತವಾಗಿ ಗುರುತಿಸಿಕೊಂಡಿದ್ದಾರೆ.
ಅವರ ಅವಧಿಯಲ್ಲಿ ಸ್ತ್ರೀಶಕ್ತಿ ಸಂಘಗಳ ರಚನೆಗೆ ಅವಕಾಶ ನೀಡಿದ್ದು, ಇಂದು ಕೋಲಾರ ಜಿಲ್ಲೆಯಲ್ಲಿ ಸ್ತ್ರೀಶಕ್ತಿ ಸಂಘಗಳು ಉಳಿಯುವಂತಾಗಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ರತ್ಯೇಕಗೊಳಿಸಲು ಪ್ರಯತ್ನ ನಡೆಸಿದ್ದರು. ಆದರೆ, ಜನಗಣತಿ ಮತ್ತು ಕ್ಷೇತ್ರ ವಿಂಗಡಣೆ ಪ್ರಕ್ರಿಯೆ ಇದ್ದ ಕಾರಣ ಸಾಧ್ಯವಾಗಲಿಲ್ಲ. ಆದರೆ ಕುಮಾರಸ್ವಾಮಿ ಅವಧಿಯಲ್ಲಿ ಪ್ರತ್ಯೇಕ ಜಿಲ್ಲೆಯಾಯಿತು.
ಎಸ್.ಎಂ.ಕೃಷ್ಣ ಅವರು 1999ರಲ್ಲಿ ಕೋಲಾರದ ಮೂಲಕ ಪಾಂಚಜನ್ಯ ಯಾತ್ರೆ ನಡೆಸಿ, ಅಧಿಕಾರಕ್ಕೆ ಏರಿದರು. ಆಗ ಕುರುಡುಮಲೆಯಲ್ಲಿ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ ನೀಡಿದ್ದು ಈಗ ಇತಿಹಾಸ.
ಪ್ರಮುಖರಿಂದ ಶ್ರದ್ಧಾಂಜಲಿ
ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಂಬನಿ ಮಿಡಿದಿದ್ದು, ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ಸೇರಿ ಈ ನಾಲ್ಕು ಸದನಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆಗೆ ಎಸ್.ಎಂ.ಕೃಷ್ಣ ಪಾತ್ರರಾಗಿದ್ದಾರೆ. ವಿದೇಶಾಂಗ ಮಂತ್ರಿಯಾಗಿ, ರಾಜತಾಂತ್ರಿಕ ನಿಪುಣರಾಗಿದ್ದ ಅವರು ಬಹುಭಾಷಾ ಪಾಂಡಿತ್ಯ ಪಡೆದ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, ವೇಮಗಲ್ ಉಪಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಜನತಾಪರಿವಾರದ ಎಲ್ಲ ಮುಖಂಡರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡು ಪಕ್ಷ ಬಲಗೊಳಿಸಿದ್ದರು ಎಂದು ಸ್ಮರಿಸಿದರು.
ರಾಜಕೀಯ ಗುರು
ಎಸ್.ಎಂ.ಕೃಷ್ಣ ಅವರು ಪ್ರಜಾ ಸೋಶಿಯಲಿಸ್ಟ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ನಮ್ಮ ತಂದೆ ದಿ.ಎಂ.ವಿ.ಕೃಷ್ಣಪ್ಪ ಅವರು ಕಾಂಗ್ರೆಸ್ಗೆ ಕರೆತಂದು ಅವರು ಬಹಳ ಅತ್ಯುನ್ನತ ಸ್ಥಾನಕ್ಕೇರಲು ಕಾರಣವಾಗಿದ್ದರು. ಅದೇ ರೀತಿ 1994ರಲ್ಲಿ ಅವಿಭಜಿತ ಕೋಲಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಲು ಆಗ ಎಸ್.ಎಂ.ಕೃಷ್ಣ ಅವರೇ ಕಾರಣ ಎಂದು ಮಾಜಿ ಸಚಿವ ದಿ.ಎಂ.ವಿ.ಕೃಷ್ಣಪ್ಪ ಅವರ ಹಿರಿಯ ಪುತ್ರ ಅಶೋಕ್ ಕೃಷ್ಣಪ್ಪ ನೆನಪುಗಳ ಮುಲುಕು ಹಾಕಿದರು. ನಮ್ಮ ತಂದೆ ಎಸ್.ಎಂ.ಕೃಷ್ಣ ಅವರನ್ನು ರಾಜಕೀಯ ಗುರುಗಳು ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು.
ಐಟಿಬಿಟಿ ಪಿತಾಮಹ
ಇಂದು ಬೆಂಗಳೂರು ಬೆಳೆದು ನಿಂತಿರುವ ಮಾಹಿತಿ ತಂತ್ರಜ್ಞಾನ ಉದ್ಯಮ ಐಟಿಬಿಟಿ ಇತಿಹಾಸದಲ್ಲೇ ಪ್ರಪಂಚವೇ ಬೆಂಗಳೂರನ್ನು ನೋಡುತ್ತಿದೆ ಎಂದರೆ ಅದಕ್ಕೆ ಎಸ್.ಎಂ.ಕೃಷ್ಣ ಅವರ ದೂರದೃಷ್ಟಿತ್ವ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಅಶೋಕ್ ಕೃಷ್ಣಪ್ಪ ನೆನಪಿಸಿಕೊಂಡರು. ಬೃಹತ್ ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಿದ್ದೇ ಎಸ್.ಎಂ. ಕೃಷ್ಣ, ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರದಲ್ಲಿ ದೊಡ್ಡ ಸಮಾವೇಶ ನಡೆಸಿ ಅಲ್ಲಿ ಯೋಜನೆಗೆ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ ಅವರು ಚಾಲನೆ ನೀಡಿದ್ದು ವಿಶೇಷ ಎಂದರು.