

ಆನೇಕಲ್ : ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗಾಪುರದಲ್ಲಿ ಮುತ್ತುರಾಯಸ್ವಾಮಿ ಮತ್ತು ಲ್ಮನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಗ್ರಾಮದ 10ಕ್ಕೂ ಹೆಚ್ಚು ಗ್ರಾಮದೇವತೆಗಳ ಉತ್ಸವ ಮೂರ್ತಿಗಳಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ದೇವರುಗಳನ್ನು ಹೊಳೆ ಮೆಟ್ಟಿಸಲು ಗ್ರಾಮದಿಂದ ಒಂದು ಕಿ.ಮೀ.ದೂರದಲ್ಲಿರುವ ಕೆರೆಯ ಬಳಿಗೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ತೆರಳಲಾಯಿತು. ನಂತರ ಮುತ್ತುರಾಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಹಾಕಲಾಗಿದ್ದ ಅಗ್ನಿಕೊಂಡವನ್ನು ದೇವರ ಉತ್ಸವ ಮೂರ್ತಿಯನ್ನು ಹೊತ್ತು ಅರ್ಚಕರು ಹಾಯ್ದರು. ಭಕ್ತರು ದಬ್ಬಲ ಚುಚ್ಚಿದ ಶೂಲಗಳನ್ನು ಚುಚ್ಚಿಕೊಂಡು ಭಕ್ತಿ ಸಮರ್ಪಿಸಿದರು. ಕತ್ತಿಯಿಂದ ತಮ್ಮ ದೇಹಕ್ಕೆ ಹೊಡೆದುಕೊಂಡು ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಜಾತ್ರಾ ಮಹೋತ್ಸವ ಪ್ರಯುಕ್ತ ಮುತ್ತುರಾಯಸ್ವಾಮಿ, ಲ್ಮನರಸಿಂಹಸ್ವಾಮಿ, ಬಸವೇಶ್ವರ ಸ್ವಾಮಿ, ಮಾರಿಯಮ್ಮ ದೇವಿ, ಗಂಗಮ್ಮದೇವಿ, ಯಲ್ಲಮ್ಮ ದೇವಿ, ಸೀಮಮ್ಮದೇವಿ, ಮಹದೇಶ್ವರ ಸ್ವಾಮಿ, ಹೊನ್ನೇರಮ್ಮ ದೇವಿ ಮತ್ತು ತಿಮ್ಮರಾಯಸ್ವಾಮಿ ದೇವರ ಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಹತ್ತಕ್ಕೂ ಹೆಚ್ಚು ಗ್ರಾಮದೇವತೆಗಳ ಉತ್ಸವಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಗ್ನಿಕೊಂಡ ಹಾಯುವ ಮೂಲಕ ಭಕ್ತರು ಭಕ್ತಿ ಸಮರ್ಪಿಸಿದರು. ಎರಡು ಕಿ.ಮೀ.ಗೂ ಹೆಚ್ಚು ದೂರ ಮೆರವಣಿಗೆ ಸಾಗಿತು. ತಮಟೆಯ ಸದ್ದಿಗೆ ಭಕ್ತರು ಕತ್ತಿ ಹಿಡಿದು ಭಾವೋದ್ಘೋಷಕ್ಕೆ ಒಳಗಾಗಿದ್ದ ದೃಶ್ಯ ಕಂಡು ಬಂದಿತು. ಆಂಜನೇಯ ವೇಷಧಾರಿಯು ಮೆರವಣಿಗೆಗೆ ಮೆರುಗು ನೀಡಿದರು.