

ಮಂಡ್ಯ: ತಾಲೂಕಿನ ಮುತ್ತೇಗೆರೆ ಗ್ರಾಮ ಪಂಚಾಯಿತಿಯಲ್ಲಿನ ಅವ್ಯವಸ್ಥೆ ಖಂಡಿಸಿ ಬುಧವಾರ ಸದಸ್ಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಪಂ ಕಚೇರಿ ಎದುರು ಧರಣಿ ನಡೆಸಿ ಸಮಸ್ಯೆ ಬಗೆಹರಿಸುವಂತೆ ಹಲವು ಬಾರಿ ಮನವಿ ಕೊಟ್ಟರೂ ಕ್ರಮ ವಹಿಸದೇ ನಿರ್ಲಕ್ಷೃ ವಹಿಸಲಾಗುತ್ತಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂಯಲ್ಲಿ ಹಣ ದುರುಪಯೋಗವಾಗಿದ್ದು, ದೂರು ನೀಡಿದರೂ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮ ತೆಗೆದುಕೊಂಡಿಲ್ಲ. ಸುಮಾರು 30 ಲಕ್ಷ ರೂ ದುರುಪಯೋಗವಾಗಿದೆ. ಬೀದಿ ದೀಪ, ಕರೊನಾ ಸಾಮಗ್ರಿಗಳ ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ ಡ್ರಾ ಮಾಡಿದ್ದಾರೆ. ಆದರೆ ಎಲ್ಲಿಯೂ ಬಿಲ್ ತೋರಿಸಿರುವುದಿಲ್ಲ. ನಡಾವಳಿ ಪುಸ್ತಕದಲ್ಲಿ ಮಾಹಿತಿ ಇಲ್ಲ. ಆದ್ದರಿಂದ ಕೂಡಲೇ ಕ್ರಮವಾಗಬೇಕು ಎಂದು ಆರೋಪಿಸಿದರು.
ಖಾಲಿ ಉಳಿದಿರುವ ಬಿಲ್ ಕಲೆಕ್ಟರ್ ಹಾಗೂ ಕಾರ್ಯದರ್ಶಿ ಹುದ್ದೆಗಳು ಎರಡು ವರ್ಷಗಳಿಂದ ಉಳಿದಿದ್ದು ಅವುಗಳನ್ನು ಶೀಘ್ರದಲ್ಲಿಯೇ ನೇಮಿಸಿಕೊಡಬೇಕು. ನಿಯೋಜಿತ ಸಿಬ್ಬಂದಿಯಿಲ್ಲದೆ ಗ್ರಾಪಂ ಕೆಲಸಗಳು ನನೆಗುದಿಗೆ ಬಿದ್ದಿವೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹುನುಗನಹಳ್ಳಿ ಗ್ರಾಮದಲ್ಲಿ ಸರ್ಕಾರದಿಂದ ಗ್ರಾೃಂಟ್ ನೀಡಿ ಮನೆ ನಿರ್ಮಿಸಿ ಎಂದು ಇರುವ ಮನೆಗಳನ್ನು ಕೆಡವಿಸಿದ್ದಾರೆ. ಆದರೆ, ಅಡಿಪಾಯ ಹಾಕಿದ ಮೇಲೆ ಅನುದಾನ ಸ್ಥಗಿತಗೊಳಿಸಿದ್ದಾರೆ. ಬಿಲ್ ಮಾಡದೆ ಇರುವ ಕಾರಣ ಮನೆ ಕಟ್ಟಲು ಆಗದೆ ಪರದಾಡುವಂತಾಗಿದೆ. ಅಂತೆಯೇ ಶಾಲಾ ಆವರಣವನ್ನು ಅಕ್ರಮವಾಗಿ ಆವರಿಸಿಕೊಂಡಿದ್ದಾರೆ. ಇದನ್ನು ತೆರವುಗೊಳಿಸುವ ಗೋಜಿಗೆ ಯಾರು ಮುಂದಾಗಿಲ್ಲ ಎಂದರು.
ಪ್ರತಿಭಟನೆಯಲ್ಲಿ ಸದಸ್ಯರಾದ ಶಿವಕುಮಾರ್, ಸುಧಾ, ಎಸ್‌ಡಿಎಂಸಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಆನಂದ್, ದಾಸಯ್ಯ ಇತರರಿದ್ದರು.