

ಮಂಡ್ಯ: ತಾಲೂಕಿನ ಮುತ್ತೇಗೆರೆ ಗ್ರಾಮ ಪಂಚಾಯಿತಿಯಲ್ಲಿ ಹಣ ದುರುಪಯೋಗವಾಗಿದ್ದು, ದೂರು ನೀಡಿದರೂ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮ ತೆಗೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಂಟು ಸದಸ್ಯರು ಆ.17ರಂದು ಬೆಳಗ್ಗೆ 11ಕ್ಕೆ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿ ಬೀಗ ಜಡಿದು ಕೀಲಿಕೈಯನ್ನು ಸಿಇಒಗೆ ಹಸ್ತಾಂತರಿಸಲಾಗುವುದು ಎಂದು ಗ್ರಾಪಂ ಸದಸ್ಯ ಎಚ್.ವಿ.ಶಿವಕುಮಾರ್ ತಿಳಿಸಿದರು.
ಸುಮಾರು 30 ಲಕ್ಷ ರೂ ದುರುಪಯೋಗವಾಗಿದೆ. ಬೀದಿ ದೀಪ, ಕರೊನಾ ಸಾಮಗ್ರಿಗಳ ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ ಡ್ರಾ ಮಾಡಿದ್ದಾರೆ. ಆದರೆ ಎಲ್ಲಿಯೂ ಬಿಲ್ ತೋರಿಸಿರುವುದಿಲ್ಲ. ನಡಾವಳಿ ಪುಸ್ತಕದಲ್ಲಿ ಮಾಹಿತಿ ಇಲ್ಲ. ಆದ್ದರಿಂದ ಕೂಡಲೇ ಕ್ರಮವಾಗಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದರು.
ಗ್ರಾಪಂನಲ್ಲಿ ಗ್ರಾಮ ಸಭೆ, ವಾರ್ಡ್ ಸಭೆ ನಡೆಸಿಲ್ಲ. ಗ್ರಾಪಂನಲ್ಲಿ ಕಾರ್ಯದರ್ಶಿ ಹಾಗೂ ಬಿಲ್ ಕಲೆಕ್ಟರ್ ಹುದ್ದೆಗಳು ಖಾಲಿಯಾಗಿವೆ. ಇದುವರೆಗೂ ಭರ್ತಿ ಮಾಡಿಲ್ಲ. ಪಿಡಿಒ ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದಿಲ್ಲ. ಸದಸ್ಯರ ನಿರ್ಣಯ ಪಡೆಯದೇ ಏಕಾಏಕಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಇದರ ವಿರುದ್ಧ ಹಲವಾರು ಬಾರಿ ಜಿಪಂ ಹಾಗೂ ತಾಪಂಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಶಾಸಕ ಎಂ.ಶ್ರೀನಿವಾಸ್ ಹಾಗೂ ಎಂಎಲ್‌ಸಿ ದಿನೇಶ್‌ಗೂಳಿಗೌಡ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.