ಮುತ್ತಪ್ಪ ಜಾತ್ರಾ ಮಹೋತ್ಸವ ಸಂಪನ್ನ

mutthappa
Published on

ಮಡಿಕೇರಿ: ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ೧೪ ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ಜಾತ್ರೆಯು ಶನಿವಾರ ಸಂಪನ್ನಗೊಂಡಿತು.


ದೇವಾಲಯದ ತಂತ್ರಿಗಳಾದ ಕೇರಳದ ಪಯ್ಯನ್ನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ತ್ ಮುರಳಿಕೃಷ್ಣನ್ ನಂಬೂದರಿ ಹಾಗೂ ಪರಿಶಿನಿಕಡವು ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್, ಬ್ಲಾತೂರ್ ಚಂದ್ರನ್ ಮಡೆಯಚ್ಚನ್‌ರವರ ನೇತೃತ್ವದಲ್ಲಿ ನಾಲ್ಕುದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳು ಜರುಗಿತು.


ಮೊದಲ ದಿನ ಪ್ರಾರ್ಥನೆ, ಪುಣ್ಯಾಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಪೂಜೆ, ವಾಸ್ತು ಕಲಶಾಭಿಷೇಕ, ವಾಸ್ತು ಬಲಿ, ವಾಸ್ತು ಪುಣ್ಯಾಹ, ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಎರಡನೇ ದಿನ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ಗಣಪತಿ ಹೋಮ, ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ, ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ನಾಗ ದೇವರಿಗೆ ತಂಬಿಲ ಸಮರ್ಪಣೆ, ಕಲಶಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರುಗಿತು.


ಮುತ್ತಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದ ಮೂಲಕ ಚಾಲನೆ ದೊರೆಯಿತು. ನಂತರ ಮುತ್ತಪ್ಪ ದೇವರ ಮಲೆ ಇಳಿಸುವುದು, ಮುತ್ತಪ್ಪ ದೇವರ ವೆಳ್ಳಾಟಂ, ಭಗವತಿ ದೇವಿಗೆ ದೀಪಾರಾಧನೆ ಮತ್ತು ಪುಷ್ಪಾರ್ಚನೆ, ಹರಕೆ ಕೋಲಗಳು ನೆರವೇರಿತು. ೩ನೇಯ ದಿನ ನಗರದ ಗಾಂಧಿ ಮೈದಾನದಿಂದ ನಗರದ ಮುಖ್ಯ ಬೀದಿಗಳಲ್ಲಿ ಕಲಶ ಹಾಗೂ ತಾಲಾಪೆಲಿ ಆಕರ್ಷಕ ಚಂಡೆ ವಾದ್ಯ ಸಹಿತ ಆಕರ್ಷಕ ಕಲಾತಂಡಗಳು ಮತ್ತು ವಿದ್ಯುತ್ ಅಲಕೃಂತ ಮಂಟಪಗಳ ಮೆರವಣಿಗೆ ನಡೆಯಿತು. ಶುಕ್ರವಾರ ಸಂಜೆ ೪ ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ೪.೩೦ ಗಂಟೆಗೆ ಶಾಸ್ತಪ್ಪ ದೇವರ ವೆಳ್ಳಾಟಂ, ೫.೩೦ ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ ೭ ಗಂಟೆಗೆ ಶ್ರೀ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, ೮.೪೦ಕ್ಕೆ ಅನ್ನಸಂತರ್ಪಣೆ ನೆರವೇರಿತು.


ನಂತರ ಪೇದಿ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ, ಶಿವಭೂತ ತೆರೆ, ಗುಳಿಗ ದೇವರ ತೆರೆ, ಕಳಗ ಪಾಟ್, ಸಂದ್ಯಾವೇಲೆ, ಕುಟ್ಟಿಚಾತನ್ ದೇವರ ತೆರೆ ಜರುಗಿತು. ಶನಿವಾರ ಮುಂಜಾನೆ ೪ ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ತೆರೆ, ೫ ಗಂಟೆಗೆ ವಿಷ್ಣುಮೂರ್ತಿ ದೇವರ ಮೇಲೇರಿ, ಪೋದಿ ತೆರೆ, ವಿಷ್ಣುಮೂರ್ತಿ ದೇವರ ಬಾರಣೆ, ಮಧ್ಯಾಹ್ನ ೧೧.೩೦ಕ್ಕೆ ಧ್ವಜ ಅವರೋಹಣ ನೆರವೇರಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ದೇವತಾಕಾರ್ಯಗಳಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net