ಇಂದಿನಿಂದ ಮುತ್ತಪ್ಪ ಜಾತ್ರಾ ಮಹೋತ್ಸವ

WhatsApp Image 2023-04-05 at 7.15.35 PM
Published on

ಮಡಿಕೇರಿ: ಮುತ್ತಪ್ಪ ದೇವಾಲಯ ಸಮಿತಿ ವತಿಯಿಂದ ದೇವಾಲಯದ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ಜಾತ್ರಾ ಮಹೋತ್ಸವ ಏ.೬ರಿಂದ ಏ.೮ರವರೆಗೆ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುತ್ತಪ್ಪ ದೇವಾಲಯದಲ್ಲಿ ಪ್ರತಿ ವರ್ಷ ನಾಗರ ಪಂಚಮಿ, ನವರಾತ್ರಿ ಉತ್ಸವ, ಶ್ರೀ ಅಯ್ಯಪ್ಪ ದೇವರ ಮಂಡಲ ಪೂಜೆ ಮತ್ತು ಮಕರ ಸಂಕ್ರಮಣ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಷಷ್ಠಿ ಪೂಜೆ ಶ್ರೀ ಪಾರ್ವತಿ ದೇವಿಗೆ ಪೊಂಗಾಲ ಸಮರ್ಪಣೆ, ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ದೇವರ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರೆಯನ್ನು ವಿಜ್ರಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ಸಾಲಿನ ಕಾರ್ಯಕ್ರಮ ಏ.೫ರಿಂದ ಆರಂಭವಾಗಲಿದೆ ಎಂದು ತಿಳಿಸಿದರು.


ಏ.೫ ರಂದು ಸಂಜೆ ಕೇರಳದ ಪಯ್ಯನ್ನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ತ್ ಮುರಳಿಕೃಷ್ಣನ್ ನಂಬೂದರಿರವರ ನೇತೃತ್ವದಲ್ಲಿ ಮುತ್ತಪ್ಪನ್, ತಿರುವಪ್ಪನ್, ಸುಬ್ರಹ್ಮಣ್ಯ, ಅಯ್ಯಪ್ಪ, ಶಕ್ತಿ ಗಣಪತಿ, ಭಗವತಿ, ವಿಷ್ಣುಮೂರ್ತಿ, ಗುಳಿಗ, ಶಿವಭೂತಂ, ಗುರು, ಪೋದಿ, ಕುಟ್ಟಿಚಾತನ್, ಯಕ್ಷಿ, ನಾಗರಾಜ-ನಾಗಯಕ್ಷಿ, ನಾಗದೇವರ ಬನ ಸೇರಿದಂತೆ ೧೪ ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ವಿಶೇಷ ಪೂಜೆಗಳು ನಡೆಯಿತು. ಏ.೬ರ ಬೆಳಿಗ್ಗೆ ೭ ಗಂಟೆಗೆ ಶಕ್ತಿಗಣಪತಿ ದೇವರಿಗೆ ೨೧ ತೆಂಗಿನ ಕಾಯಿಗಳ ಮಹಾ ಗಣಪತಿ ಹೋಮ, ಬೆ.೮ ಗಂಟೆಗೆ ಕಲಶ ಪೂಜೆ, ನಾಗದೇವರಿಗೆ ನೂರುಂಪಾಲುಂ(ನಾಗತಂಬಿಲ) ಸಮರ್ಪಣೆ, ೧೦.೩೦ ಗಂಟೆಗೆ ಕಲಶಾಭಿಷೇಕ, ಮಧ್ಯಾಹ್ನ ೧೨-೦೦ ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.


ಸಂಜೆ ೪.೩೦ ಗಂಟೆಗೆ ಕೇರಳದ ಪರಿಶಿನಿಕಡವು ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್, ಬ್ಲಾತೂರ್ ಚಂದ್ರ್ ಮಡೆಯಚ್ಚನ್ ನೇತೃತ್ವದಲ್ಲಿ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ಧ್ವಜಾರೋಹಣ, ೫ ಗಂಟೆಗೆ ಶ್ರೀ ಮುತ್ತಪ್ಪ ದೈವಕೋಲಗಳ ವೀಕ್ಷಣೆಗೆ ದಾನಿಗಳ ಸಹಾಯದಿಂದ ನಿರ್ಮಿಸಿದ ಶಾಶ್ವತ ಗ್ಯಾಲರಿ ಉದ್ಘಾಟನೆ ನಡೆಯಲಿದೆ. ೫.೩೦ ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ, ಪಾರ್ವತಿ ದೇವಿಗೆ ಪುಷ್ಪಾರ್ಚನೆ ಮತ್ತು ದೀಪಾರಾಧನೆ ನಡೆಯಲಿದೆ ಎಂದು ವಿವರಿಸಿದರು.


ಏ.೭ರಂದು ಬೆಳಿಗ್ಗೆ ೧೦ ಗಂಟೆಗೆ ಮುತ್ತಪ್ಪ ದೇವರ ಮೊದಕಲಶ ಸ್ಥಾಪನೆ, ಸಂಜೆ ೫.೩೦ ಗಂಟೆಗೆ ಕಲಶ ಮೆರವಣಿಗೆ ನಗರದ ಗಾಂಧಿ ಮೈದಾನದಿಂದ ಹೊರಡಲಿದೆ. ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಸಂಪಿಗೆ ಕಟ್ಟೆ, ಮೈಸೂರು ರಸ್ತೆಯ ಡಿಪೊ ಬಳಿ, ಮೈತ್ರಿ ಜಂಕ್ಷನ್‌ನ ನಗರದ ನಾಲ್ಕೂ ದಿಕ್ಕುಗಳಿಂದ ಹೊರಡುವ ಕಳಸ ಮೆರವಣಿಗೆ ಮುತ್ತಪ್ಪ ದೇವಾಲಯದ ಕಲಶದೊಂದಿಗೆ ಮಹಿಳೆಯರು ಮತ್ತು ಮಕ್ಕಳ ತಾಲಾಪೊಲಿ, ಮಂಗಳೂರಿನ ಆಕರ್ಷಕ ಯಕ್ಷಗಾನ ವೇಷಗಳು, ಸತ್ಯನಾರಾಯಣ ಭಜನಾ ಮಂಡಳಿ, ಗುಂಡೂರಿ ವೇಣೂರು, ದಕ್ಷಿಣ ಕನ್ನಡ, ಚಿಂಗಾರಿ ಮೇಳಗಳು, ಆಕರ್ಷಕ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಲಿದೆ ಎಂದು ತಿಳಿಸಿದರು.


ಸಂಜೆ ೪ ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು. ೪.೩೦ ಗಂಟೆಗೆ ಶಾಸ್ತಪ್ಪ ದೇವರ ವೆಳ್ಳಾಟಂ, ೫ ಗಂಟೆಗೆ ಶಾಸ್ತಪ್ಪ ದೇವರ ವೆಳ್ಳಾಟಂ, ೫.೩೦ ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ, ರಾತ್ರಿ ೭ ಗಂಟೆಗೆ ವಿಷ್ಣುಮೂರ್ತಿ ಮೇಲೇರಿಗೆ ಅಗ್ನಿ ಸ್ಪರ್ಶ, ೯.೩೦ ರಿಂದ ೧.೩೦ ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ೯.೩೦ ಗಂಟೆಗೆ ಪೊವದಿ ವೆಳ್ಳಾಟಂ, ೧೦.೩೦ ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, ಶಿವಭೂತ ತೆರೆ, ಗುಳಿಗ ದೇವರ ತೆರೆ, ಕಳಗ ಪಾಟ್, ಸಂದ್ಯಾವೇಲೆ, ಕುಟ್ಟಿಚಾತನ್ ದೇವರ ತೆರೆ ನಡೆಯಲಿದೆ. ಏ.೮ರ ಬೆಳಿಗ್ಗೆ ೪ ಗಂಟೆಗೆ ಮುತ್ತಪ್ಪ ಮತ್ತು ತಿರುವಪ್ಪ ದೇವರ ತೆರೆ ಹೀಗೆ ಹಲವು ದೈ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೧.೩೦ ಕ್ಕೆ ಧ್ವಜ ಅವರೋಹಣ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಉತ್ಸವ ಸಮಿತಿ ಅಧ್ಯಕ್ಷ ಸುರೇಶ್, ಮುತ್ತಪ್ಪ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ರಾಮನ್, ದೇವಾಲಯ ಅರ್ಚಕರು ಕೆ.ಎಸ್.ರಮೇಶ್, ಮುತ್ತಪ್ಪ ಮಹಿಳಾ ವೇದಿಕೆ ಉಪಾಧ್ಯಕ್ಷೆ ಕೂಡಂಡ ದೀಪಾ ಕಾವೇರಪ್ಪ, ದೇವಾಲಯ ಸಮಿತಿ ಸದಸ್ಯ ತೇಜ್ ರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net